ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡು ಮಕ್ಕಳಿಗೂ ಉಡುದಾರಕ್ಕೂ ಬಿಡಿಸಲಾಗದ ನಂಟಿದೆ. ಇದು ಒಂದು ದಾರ ಮಾತ್ರ ಆಗಿರದೆ, ಇದರ ಹಿಂದೆ ಒಂದು ಸಂಪ್ರದಾಯ, ವಿಜ್ಞಾನ ಕೂಡ ಇದೆ. ಸಾಮಾನ್ಯವಾಗಿ ಭಾರತೀಯ ಸಂಪ್ರದಾಯಗಳಲ್ಲಿ ವಿಜ್ಞಾನವೂ ಥಳುಕು ಹಾಕಿಕೊಂಡಿರುತ್ತದೆ. ಅದರಂತೆ ಗಂಡಸರು ಉಡುದಾರದ ಹಿಂದೆಯೂ ಒಂದು ಕಾರಣವಿದೆ.
ಸಾಮಾನ್ಯವಾಗಿ, ಮಕ್ಕಳು ಹುಟ್ಟಿದ ಬಳಿಕ ಹೆಣ್ಣು-ಗಂಡೆಂಬ ಭೇದವಿಲ್ಲದೆ ಈ ಉಡುದಾರವನ್ನು ಹಾಕಲಾಗುತ್ತದೆ. ಬಳಿಕ ಹೆಣ್ಣುಮಗು ಬೆಳೆಯುತ್ತಿದ್ದಂತೆ ಅದನ್ನು ತೆಗೆದುಹಾಕುತ್ತಾರೆ. ಆದರೆ, ಹುಡುಗರಿಗೆ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ಸಂಪ್ರದಾಯದ ಜೊತೆಗೆ ಆರೋಗ್ಯ ಕಾರಣಗಳೂ ಇವೆ.
ಚಿಕ್ಕ ಮಕ್ಕಳಿಗೆ ಅವರ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು ಮತ್ತು ಸ್ನಾಯುಗಳು ಸರಿಯಾಗಿ ಬೆಳೆಯಲೆಂದು, ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಅವಧಿಯಲ್ಲಿ ಶಿಶ್ನವು ಅಸಮತೋಲನವಾಗದಂತೆ ಈ ಉಡುದಾರ ಕಟ್ಟಲಾಗುತ್ತಂತೆ. ಮಕ್ಕಳ ಸೊಂಟದಲ್ಲಿ ಈ ದಾರ ಸರಿದಾಡುವುದರಿಂದ ರಕ್ತ ಸಂಚಾರವೂ ಉತ್ತಮಗೊಳ್ಳುತ್ತದೆ ಜೊತೆಗೆ ಹರ್ನಿಯಾದಿಂದ ರಕ್ಷಣೆ ನೀಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಉಡುದಾರ ಕಟ್ಟುವುದರಿಂದ ದೃಷ್ಟಿಯಾಗುವುದಿಲ್ಲ, ಹಾಗೆಯೇ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ ಎಂದು ಹೇಳಲಾಗುತ್ತದೆ.
ಈ ಉಡುದಾರಗಳಲ್ಲಿ ಹಲವು ಬಗೆಗಳಿವೆ. ಚಿನ್ನ, ಬೆಳ್ಳಿ, ತಾಮ್ರದ ಉಡುದಾರ ಬಳಸಿದರೆ, ಕೆಲವರು ಕೆಂಪು, ಕಪ್ಪು ದಾರಗಳನ್ನು ಬಳಸುತ್ತಾರೆ. ಬೆಳ್ಳಿಯನ್ನು ಬಳಸುವುದರಿಂದ ಉಷ್ಣತೆಯನ್ನು ಹೀರಿಕೊಳ್ಳುವುದಲ್ಲದೆ, ಸೊಂಟದ ನರಗಳು ಬಿಗಿಯಾಗುವಂತೆ ನೋಡಿಕೊಳ್ಳುತ್ತದೆ.