ಕಾಫಿ ಡೇ ಎಂಟರ್‌ಪ್ರೈಸಸ್‌ಗೆ 26 ಕೋಟಿ ರೂ. ದಂಡ ವಿಧಿಸಿದ ಸೆಬಿ: 45 ದಿನ ಗಡುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದಾದ್ಯಂತ ಕಾಫಿ ಔಟ್‌ಲೆಟ್‌ ಗಳನ್ನು ಹೊಂದಿರುವ ಕೆಫೆ ಕಾಫೀ ಡೇ ಮಾಲೀಕತ್ವ ಹೊಂದಿರುವ ಕಾಫೀ ಡೇ ಎಂಟರ್‌ಪ್ರೈಸಸ್‌ ಗೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಬರೋಬ್ಬರಿ 26 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ತನ್ನ ಅಂಗಸಂಸ್ಥೆಗಳಿಂದ ಪ್ರವರ್ತಕರಿಗೆ(Promoters) ಸಂಬಂಧಿಸಿದ ಕಂಪನಿಗೆ ಹಣವನ್ನು ರವಾನಿಸಿದ ಅಥವಾ ತಿರುಗಿಸಿದ ಆರೋಪದ ಅಡಿಯಲ್ಲಿ ಸೆಬಿ ಈ ದಂಡವನ್ನು ವಿಧಿಸಿದೆ.

ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ (ಸಿಡಿಇಎಲ್) 7 ಅಂಗಸಂಸ್ಥೆಗಳಿಂದ ಸಿಡಿಇಎಲ್‌ನ ಪ್ರವರ್ತಕರಿಗೆ ಸಂಬಂಧಿಸಿದ ಘಟಕವಾದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್‌ಗೆ 3,535 ಕೋಟಿ ರೂ. ಮೊತ್ತದ ಹಣವನ್ನು ತಿರುಗಿಸಿರುವುದನ್ನು ಸೆಬಿ ಪತ್ತೆ ಮಾಡಿದ್ದು ಈ ಸಂಬಂಧ ದಂಡ ವಿಧಿಸಿ 43 ಪುಟಗಳ ಆದೇಶ ಹೊರಡಿಸಿದೆ.

ಏಳು ಅಂಗಸಂಸ್ಥೆಗಳಿಂದ MACEL ಗೆ ವರ್ಗಾಯಿಸಲಾದ ಹಣವು VG ಸಿದ್ಧಾರ್ಥ ಅವರ ಕುಟುಂಬ ಮತ್ತು ಸಂಬಂಧಿಕರ ವೈಯಕ್ತಿಕ ಖಾತೆಗಳಿಗೆ ಹೋಗಿದೆ ಎಂದು ಸೆಬಿ ಆರೋಪಿಸಿದೆ. ಸಿದ್ಧಾರ್ಥ ಅವರ ಕುಟುಂಬವು MACEL ನಲ್ಲಿ 91.75 ರಷ್ಟು ಪಾಲನ್ನು ಹೊಂದಿದ್ದು ಅದರ ಸಂಪೂರ್ಣ ಮಾಲೀಕತ್ವವನ್ನು ಹೊಂದಿದೆ.

45 ದಿನಗಳೊಳಗೆ ದಂಡವನ್ನು ಪಾವತಿಸುವಂತೆ ಕಂಪನಿಗೆ ಸೂಚಿಸಲಾಗಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಸೆಬಿಯು ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ (MACEL) ಮತ್ತು ಅದರ ಸಂಬಂಧಿತ ಘಟಕಗಳಿಂದ ಸಂಪೂರ್ಣ ಬಾಕಿಗಳನ್ನು ವಸೂಲಿ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!