ಹೊಸದಿಗಂತ ಮಂಗಳೂರು:
ಸುತ್ತಲೂ ಕಣ್ಮನ ಸೆಳೆಯುವ ಹಚ್ಚ ಹಸಿರು, ಅರಳಿನಿಂತ ಭತ್ತದ ಬೆಳೆ, ವಿಶಾಲವಾದ ಮರಗಳು, ತರಕಾರಿ ಚಪ್ಪರಗಳು, ಪಕ್ಕದಲ್ಲೇ ಗೋಮಾತೆ, ತಂಪಿನ ಗಾಳಿ, ಹೇರಳವಾಗಿ ಹಣ್ಣುಹಂಪಲು…
ಯಾವುದೋ ಸುಂದರವಾದ ಹಳ್ಳಿಯ ಚಿತ್ರಣ ಕಟ್ಟುಕೊಡ್ತಿದ್ದೀವಿ ಅಂದುಕೊಂಡಿರಾ? ಖಂಡಿತಾ ಇಲ್ಲ, ಇದೆಲ್ಲಾ ಇರೋದು ನೆರೆಯ ಜಿಲ್ಲೆಯಾದ ಉಡುಪಿ ಜಿಲ್ಲೆಯ ಕಾವಲು ಪಡೆ ಪೊಲೀಸ್ ಸ್ಟೇಷನ್‌ನಲ್ಲಿ!
ಹೌದು, ಮಲ್ಪೆ ಬಂದರಿಗೆ ಸಮೀಪ ಇರುವ ಈ ಉಡುಪಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳೇ ಹುಮ್ಮಸ್ಸಿನಿಂದ ಕೃಷಿ ಮಾಡುತ್ತಿದ್ದಾರೆ. ಈಗ ಇದ್ದ ಭತ್ತದ ಗದ್ದೆಗಳೇ ಕಣ್ಣುಮುಚ್ಚಿ ತೆರೆಯುವ ಮೊದಲು ಕಣ್ಮರೆಯಾಗುವ ಇಂದಿನ ಕಾಲಘಟ್ಟದಲ್ಲಿ ಕೃಷಿ ಎಂಬ ನಮ್ಮ ಬದುಕಿನ ಬೇರನ್ನು ಎಂದಿಗೂ ಮರೆಯಬಾರದು ಎಂಬುದನ್ನು ಇಲ್ಲಿನ ಸಿಬ್ಬಂದಿ ತೋರಿಸಿಕೊಟ್ಟಿದ್ದಾರೆ. ಇವರ ಕೃಷಿ ಪ್ರೀತಿ ಹಾಗೂ ಗೋ ಪ್ರೇಮದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಷ್ಟೋ ಜನರಿಗೆ ಸ್ಪೂರ್ಥಿಯಾಗಿದೆ.
ಮರಳುಭೂಮಿಯಲ್ಲಿ ಕೃಷಿ ಹೇಗೆ?
ಮರಳು ಭೂಮಿಯಲ್ಲಿ, ಅದರಲ್ಲಿಯೂ ಖುದ್ದು ಪೊಲೀಸರೇ ಕೃಷಿ ಮಾಡಿದ್ದಾರೆ ಎನ್ನುವುದು ನಿಜಕ್ಕೂ ವಿಶೇಷ. ನೆಲದ ಮರಳಿನ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಬೇರೆ ಕಡೆಯಿಂದ ಕೆಂಪು ಮಣ್ಣನ್ನು ತಂದು ಭತ್ತ ಬೆಳೆಯಲಾಗಿದೆ. ಇದು ಬರೀ ಒಬ್ಬರ ಶ್ರಮ ಖಂಡಿತಾ ಅಲ್ಲ, ನಮ್ಮ ಸಿಬ್ಬಂದಿ ಜೊತೆ ಸೇರಿ ನಮ್ಮ ಕೃಷಿ ಕಾಯಕ ಮರೆಯದಂತೆ ನಾವು ಪ್ರಯತ್ನ ಮಾಡಿದ್ದೇವೆ. ವೃತ್ತಿಯ ಜೊತೆಗೆ ಕೃಷಿ ಕಾಯಕ ಮಾಡುವುದರಿಂದ ಖುಷಿ ಸಿಕ್ಕಿದೆ ಎನ್ನುತ್ತಾರೆ ಕಾವಲು ಪಡೆಯ ಎಸ್‌ಪಿ ಮಿಥುನ್.
ಮಣ್ಣಿನ ಜೊತೆ ಕನೆಕ್ಟ್ ಆಗ್ಬೇಕ್ರೀ..
ಈಗೆಲ್ಲಾ ಮಕ್ಕಳ ಕೈಗೆ ಮಣ್ಣು ತಾಗಿದ್ರೂ ತಕ್ಷಣ ಕೈಯನ್ನು ತೊಳೆಸಿಬಿಡ್ತಾರೆ. ಬಟ್ ನಾವು ಬಂದಿದ್ದು, ಹೋಗೋದು ಎಲ್ಲವೂ ಮಣ್ಣಿಗೆ. ಅದರ ಜೊತೆ ನಾವು ಕನೆಕ್ಟ್ ಆಗಬೇಕು. ನಾಟಿ ಮಾಡುವಾಗ, ಕೊಯ್ಲು ಬಂದಾಗ ಎಲ್ಲ ಕೆಲಸವನ್ನು ನಾವೇ ಮಾಡ್ತೇವೆ. ವೃತ್ತಿಗೆ ಯಾವುದೇ ಸಮಸ್ಯೆ ಆಗದಂತೆ, ಅದರ ಜೊತೆ ಜೊತೆಗೆ ಮಣ್ಣಿನೊಡನೆ ಕನೆಕ್ಟ್ ಆಗಬೇಕು. ಇದು ಈ ಪೀಳಿಗೆ ಕಲಿಯಬೇಕಾದ ವಿಷಯ ಎನ್ನುತ್ತಾರೆ ಅವರು.
ಮನೆಯ ಸುತ್ತಮುತ್ತ ಸ್ವಲ್ಪ ಜಾಗ ಇದ್ದರೂ ಅದನ್ನು ಬಳಕೆ ಮಾಡದವರು, ಮಕ್ಕಳಿಗೆ ಕೃಷಿಯ ಬಗ್ಗೆ ಹೇಳಿಕೊಡಲು ಇಷ್ಟಪಡದವರು ಈ ಠಾಣೆಯ ಹಸಿರು ಗಾಥೆಯಿಂದ ಬಹಳಷ್ಟು ಕಲಿಯುವುದಿದೆ. ಮನೆಯ ಸುತ್ತಮುತ್ತ ಸಿಗುವ ಪುಟ್ಟ ಜಾಗದಲ್ಲೇ ನಾವೂ ಕೂಡಾ ಹಸಿರು ಬೆಳೆಸಿ, ಮಣ್ಣಿನೊಂದಿಗೆ ಮಕ್ಕಳ ಒಡನಾಟ ಬೆಳೆಸುವಂತೆ ನೋಡಿಕೊಳ್ಳಬೇಕಿದೆ. ಮರಳು ಪ್ರದೇಶ ಆದರೇನು ಕೃಷಿ ಮಾಡಬೇಕು ಅಂದ್ರೆ ಮಾಡಬೇಕು ಅಷ್ಟೇ ಎಂಬ ದಿಟ್ಟ ನಿರ್ಧಾರ ಮಾಡಿರುವ ಈ ಇಲಾಖೆಗೆ, ಅದರ ಸಿಬ್ಬಂದಿಯನ್ನು ನಾವೂ ಬೆನ್ತಟ್ಟೋಣ!
ಹಸಿರುಮಯ ಕ್ಯಾಂಪಸ್ ನಮ್ಮದು
ಇಲ್ಲಿಯ ಇನ್ನೊಂದು ವಿಶೇಷತೆ ಅಂದ್ರೆ ಇಡೀ ಕ್ಯಾಂಪಸ್ ಹಸಿರುಮಯವಾಗಿದೆ. ಬಾಳೆಹಣ್ಣು, ಮಾವಿನಮರ, ಹಲಸು, ತರಕಾರಿಗಳು ಇಷ್ಟೇ ಯಾಕೆ ವಿಭಿನ್ನವಾದ ಹೂವುಗಳು ಇಲ್ಲಿವೆ. ಇದು ಯಾರದ್ದೂ ಅಲ್ಲ, ಆದರೆ ಎಲ್ಲರದ್ದೂ ಹೌದು. ಬೆಳೆದ ತರಕಾರಿಗಳನ್ನು ಊಟಕ್ಕೆ ಬಳಸುತ್ತಾರೆ. ಹಾಗೇ ಹೂವುಗಳನ್ನು ಪೂಜೆಗೆ. ಇದೊಂಥರ ಸಸ್ಟೇನಬಲ್ ಕಮ್ಯುನಿಟಿ ಹಾಗೂ ಗೋ ಗ್ರೀನ್ ಇವರ ಧ್ಯೇಯ ವಾಕ್ಯವಾಗಿದೆ.
ಅನ್ನ ಕೊಡುವ ಇಲಾಖೆಗೆ ಏನಾದ್ರು ವಾಪಸ್ ಕೊಡಬೇಕಲ್ವಾ?
ಈ ಕೃಷಿ ಐಡಿಯಾ ಬಂದದ್ದು ಇಲ್ಲಿನ ಹಿರಿಯ ಸಿಬ್ಬಂದಿ ಸಂತೋಷ್ ಶೆಟ್ಟರಿಗೆ. ರೈತನ ಮಗನಾದ ಸಂತೋಷ್ ಅವರಿಗೆ ಠಾಣೆಯ ಸುತ್ತಮುತ್ತ ಇರೋ ಜಾಗದಲ್ಲಿ ಏನಾದ್ರೂ ಕೃಷಿ ಮಾಡಬೇಕು ಅನ್ನೋ ಆಸೆ ಸದಾ ಇತ್ತಂತೆ. ಇದಕ್ಕೆ ಎಲ್ಲರೂ ಸಾಥ್ ನೀಡಿದ್ದೇ ಇಡೀ ಠಾಣೆಯ ಸುತ್ತಮುತ್ತಲಿನ ಜಾಗ ಈಗ ಹಸಿರುಮಯವಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಹುಲ್ಲುಗಳು ಮಾತ್ರ ಕಾಣಿಸುತ್ತವೆ, ಅದು ಕೂಡ ದನಗಳ ಮೇವಿಗಷ್ಟೇ. ಇಲಾಖೆ ನಮಗೆ ಅನ್ನ ಕೊಡುತ್ತದೆ. ಹಾಗಾಗಿ ನಾವು ಇಲಾಖೆಗೆ ಏನಾದ್ರೂ ಉತ್ತಮ ಕೆಲಸ ಮಾಡಿ ಹೋಗಬೇಕು ಎನ್ನೋದು ಶೆಟ್ಟರ ಅಭಿಪ್ರಾಯ.
ಯಾವುದೇ ರಾಸಾಯನಿಕ ಬಳಕೆ ಮಾಡುವುದಿಲ್ಲ
ಮರಳು ಭೂಮಿಯಲ್ಲಿ ಭತ್ತದ ಬೆಳೆ ತೆಗೆದಿರೋದು ಕಷ್ಟದ ಕೆಲಸ, ಅದರ ಜೊತೆ ಇನ್ನೊಂದು ವಿಶೇಷ ಎಂದರೆ ಇಲ್ಲಿ ಯಾವುದೇ ರಾಸಾಯನಿಕ ಬಳಕೆ ಮಾಡದೆ ಕೆಂಪಕ್ಕಿಯನ್ನು ಬೆಳೆಯುತ್ತಿದ್ದಾರೆ. ಹಸುವಿನ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ಬಿಟ್ಟು ಇಲ್ಲಿ ಇನ್ನೇನು ಬಳಕೆ ಮಾಡಿಲ್ಲ. ಭತ್ತದ ಬೆಳೆ ಇದೇ ಮೊದಲಲ್ಲ. ಈ ಹಿಂದೆ ಕೂಡ ಭತ್ತ ಬೆಳೆದು ೪೦ ಕೆಜಿಯಷ್ಟು ಭತ್ತ ಕೈಗೆ ಸಿಕ್ಕಿದೆ. ಜೊತೆಗೆ ಇಲ್ಲಿ ನೋನಿ ಮರ, ಡ್ರ್ಯಾಗನ್ ಫ್ರೂಟ್, ಪ್ಯಾಶನ್ ಫ್ರೂಟ್ ಕೂಡಾ ಬೆಳೆಸಿದ್ದಾರೆ.
ಬಂದ ಬೆಳೆಯನ್ನೆಲ್ಲಾ ಏನು ಮಾಡ್ತಾರೆ?
ರಾಶಿ ರಾಶಿ ಬಾಳೆಹಣ್ಣು, ತೆಂಗಿನಕಾಯಿ, ಮಾವು, ಹಲಸು, ಸಪೋಟ, ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದಿದ್ದರೂ ಮಾರುವುದಿಲ್ಲ ಯಾಕೆ ಎಂಬ ಪ್ರಶ್ನೆ ಕಾಡಬಹುದು. ಇಲ್ಲಿ ಯಾವ ಪದಾರ್ಥವನ್ನೂ ಹಣಕ್ಕೆ ಮಾರೋದಿಲ್ಲ, ಸಿಬ್ಬಂದಿ, ಠಾಣೆಯಲ್ಲಿರುವ ಎಲ್ಲರೂ ಹಂಚಿ ತಿನ್ನುತ್ತಾರೆ. ಇಷ್ಟು ದೊಡ್ಡ ತೋಟದ ಮೇಂಟೆನೆನ್ಸ್ ಕೆಲಸಕ್ಕೆ ಕೆಲವೊಮ್ಮೆ ಮಾರಿದ ದುಡ್ಡನ್ನು ಬಳಸಿಕೊಳ್ತಾರೆ.
ಕರಾವಳಿ ಕಾವಲು ಪಡೆಯ ಹೆಚ್ಚಿನ ಸಿಬ್ಬಂದಿ ಕೃಷಿ ಹಿನ್ನಲೆಯಿಂದ ಬಂದವರು ಇದೇ ಕಾರಣದಿಂದ ಭತ್ತ ಕೃಷಿ ಕೈಗೊಳ್ಳುವುದು ಸಾಧ್ಯವಾಗಿದೆ. ಸಮುದ್ರ ತೀರದ ಉಪ್ಪು ನೀರಿನ ವಾತಾವರಣದಲ್ಲಿ ಭತ್ತ ಕೃಷಿ ಮಾಡಬಹುದೇ ಎಂಬ ಪ್ರಾಯೋಗಿಕ ನೆಲೆಯಲ್ಲಿ ಭತ್ತ ಬೇಸಾಯ ಕೈಗೊಂಡಿದ್ದು, ಭತ್ತ ಹುಲುಸಾಗಿ ಬೆಳೆದಿದೆ. ಎರಡು ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ಇದೆ. ಇದರಲ್ಲು ಮುಕ್ಕಾಲು ಎಕರೆ ಪ್ರದೇಶದಲ್ಲಿ ಭತ್ತ ಸೇರಿದಂತೆ ವಿವಿಧ ತೋಟಗಾರಿಕಾ ಕೃಷಿ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಪಶುಸಂಗೋಪನೆಯನ್ನು ಕೈಗೊಂಡಿದ್ದು, ನಮ್ಮೆಲ್ಲ ಸಿಬ್ಬಂದಿಯ ಶ್ರಮ, ಮೇಲಧಿಕಾರಿಗಳ ಸಹಕಾರದಿಂದ ಈ ಕಾರ್ಯ ಸಾಧ್ಯವಾಗಿದೆ. ಅದೇ ರೀತಿ ವಿವಿಧ ಇಲಾಖೆ ಅಧಿಕಾರಿಗಳು ನೆರವು ಒದಗಿಸುತ್ತಿದ್ದಾರೆ.
- ಮಿಥುನ್ ಎಚ್. ಎನ್ ಐಪಿಎಸ್
ಎಸ್‌ಪಿ ಸಿಎಸ್‌ಪಿ
ಕರಾವಳಿ ಕಾವಲು ಪಡೆ ಮಲ್ಪೆ
ಪ್ರಸ್ತುತ ನಾವು ಒಂದು ಕರು ಸೇರಿದಂತೆ 4 ದನಗಳನ್ನು ಸಾಕಣೆ ಮಾಡುತ್ತಿದ್ದು, ಪೊಲೀಸರು, ಹೋಮ್‌ಗಾರ್ಡ್‌ಗಳು ಪಶುಸಾಕಣೆ ಕಾರ್‍ಯಕ್ಕೆ ನೆರವು ಒದಗಿಸುತ್ತಿದ್ದಾರೆ. ನಮ್ಮ ವಠಾರದಲ್ಲಿ ದೊರೆಯುವ ತೆಂಗಿನ ಗರಿ, ಸೇರಿದಂತೆ ಕೊಳೆಯುವ ತ್ಯಾಜ್ಯಗಳನ್ನು ಬಳಸಿಕೊಂಡು ಎರೆಹುಳು ಗೊಬ್ಬರ ತಯಾರಿ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ ಹೆಡ್‌ಕಾನ್‌ಸ್ಟೆಬಲ್ ಸಂತೋಷ್ ಶೆಟ್ಟಿ.