ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಮೂಲದ ಸೀಮಾ ಹೈದರ್ ಪಬ್‌ಜೀ (PUBG) ಮೂಲಕ ಕೇವಲ ಸಚಿನ್ ಜೊತೆಗೆ ಮಾತ್ರವಲ್ಲ ಭಾರತದ ಹಲವರನ್ನು ಸಂಪರ್ಕಿಸಿದ್ದಾಳೆ ಅನ್ನೋ ಸ್ಫೋಟಕ ರಹಸ್ಯ ವಿಚಾರಣೆ ವೇಳೆ ಬಯಲಾಗಿದೆ.
ನೋಯ್ಡಾ ಪೊಲೀಸರು ಎಲ್ಲ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿದ್ದು, ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆಯ ಎಲ್ಲಾ ದಾಖಲೆಗಳನ್ನ ವಶಪಡಿಸಿಕೊಂಡಿದ್ದು, ದೆಹಲಿಯಲ್ಲಿರುವ ಪಾಕಿಸ್ತಾನ ರಾಜಭಾರಿ ಕಚೇರಿಗೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ.
ಈ ವೇಳೆ ಸೀಮಾ ದೆಹಲಿ ಎನ್‌ಸಿಆರ್ (Delhi NCR) ಪ್ರದೇಶದ ಹಲವರನ್ನು ಪಬ್‌ಜೀ ಮೂಲಕ ಸಂಪರ್ಕಿಸಿದ್ದಾಳೆ ಎಂದು ತಿಳಿದುಬಂದಿದೆ.
ಮೇ ತಿಂಗಳಲ್ಲಿ ಭಾರತದ ಸಚಿನ್ ಜೊತೆ ನೆಲೆಸಲು ನೇಪಾಳ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಏಜೆನ್ಸಿಗಳು ತೀವ್ರ ನಿಗಾ ವಹಿಸಿವೆ.
ಸೀಮಾಳ ಪಾಸ್‌ಪೋರ್ಸ್, ಪಾಕಿಸ್ತಾನಿ ಗುರುತಿನ ಚೀಟಿ ಹಾಗೂ ಮಕ್ಕಳ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನ ಪೊಲೀಸರು ತನಿಖೆ ಸಮಯದಲ್ಲಿ ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ಪಾಕಿಸ್ತಾನ ರಾಯಭಾರಿ ಕಚೇರಿಗೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬರುವವರೆಗೆ ತನಿಖೆ ಮುಂದುವರಿಯಲಿದೆ.
ಸೀಮಾ ಹೈದರ್ ತನ್ನ ಮೊಬೈಲ್ ಡೇಟಾವನ್ನು ಡಿಲೀಟ್ ಮಾಡಿರುವ ಶಂಕೆ ಹಿನ್ನೆಲೆ ಮೋಬೈಲ್ ಅನ್ನು ಗಾಜಿಯಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆದ್ರೆ ಸೀಮಾ ಹೈದರ್ ತನ್ನ ಯಾವುದೇ ಡೇಟಾವನ್ನ ಅಳಿಸಿಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಸಚಿನ್ ಮೀನಾ ಮತ್ತು ಸೀಮಾ ಹೈದರ್‌ಗೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರ್ ಕಾರ್ಡ್ ಬದಲಾವಣೆ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಇಬ್ಬರು ಸಹೋದರರನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಪುಷ್ಪೇಂದ್ರ ಮೀನಾ ಮತ್ತು ಅವರ ಸಹೋದರ ಪವನ್ ಆರೋಪಿಗಳನ್ನ ಅಹ್ಮದ್‌ಗಢದ ಸಾರ್ವಜನಿಕ ಸೇವಾ ಕೇಂದ್ರದಲ್ಲಿ ಆರೋಪಿಗಳಾಗಿದ್ದಾರೆ.