August 19, 2026
Wednesday, August 19, 2026
spot_img

ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ರಾಮಚಂದ್ರೇಗೌಡ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ರಾಮಚಂದ್ರೇಗೌಡ ಅವರು ವಯೋಸಹಜ ಕಾಯಿಲೆಯಿಂದಾಗಿ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರಾಮಚಂದ್ರೇಗೌಡರನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ನಿಧನರಾಗಿದ್ದಾರೆ.

ಆರ್‌ಎಸ್‌ಎಸ್‌ ಹಿನ್ನೆಲೆ ಹೊಂದಿದ್ದ ರಾಮಚಂದ್ರೇಗೌಡರು, 1953ರಲ್ಲೇ ಸಂಘವನ್ನು ಸೇರುವ ಮೂಲಕ ತಮ್ಮ ಸಾರ್ವಜನಿಕ ಜೀವನ ಆರಂಭಿಸಿದರು. ತದನಂತರ 1970 ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಪಡೆದರು.

ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಗಲಿಗೆ ಹೆಗಲು ಕೊಟ್ಟು ಸಾತ್ ನೀಡಿದ್ದ ಪ್ರಮುಖ ನಾಯಕರಲ್ಲಿ ರಾಮಚಂದ್ರೇಗೌಡರು ಒಬ್ಬರಾಗಿದ್ದರು. ಪಕ್ಷದ ಆರಂಭದ ದಿನಗಳಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಿಜೆಪಿಯ ಮುಂಚಿನ ರೂಪವಾಗಿದ್ದ ‘ಭಾರತೀಯ ಜನಸಂಘ’ದ ವತಿಯಿಂದ ಅಂದಿನ ಬೆಂಗಳೂರು ನಗರ ನಿಗಮಕ್ಕೆ (ಬಿಸಿಸಿ – ಈಗಿನ ಜಿಬಿಎ ) ಆಯ್ಕೆಯಾದ ಮೊದಲ ಕಾರ್ಪೊರೇಟರ್ ಎಂಬ ಹೆಗ್ಗಳಿಕೆ ರಾಮಚಂದ್ರೇಗೌಡರದ್ದಾಗಿತ್ತು. ಆ ಮೂಲಕ ಬೆಂಗಳೂರಿನಲ್ಲಿ ಪಕ್ಷದ ಗಟ್ಟಿಯಾದ ಬೇರುಗಳನ್ನು ಬಿಡಲು ಅವರು ಕಾರಣರಾಗಿದ್ದರು. ಐದು ಬಾರಿ ವಿಧಾನಪರಿಷತ್‌ ಎಮ್‌ಎಲ್‌ಎ ಆಗಿ ದಾಖಲೆ ಬರೆದ ಸಚಿವರು ಬಿಎಸ್‌ವೈ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !