Tuesday, August 16, 2022

Latest Posts

ಹಿರಿಯ ಪತ್ರಕರ್ತ ‌ಮನು ಶೆಣೈ ಇನ್ನಿಲ್ಲ..

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಪತ್ರಿಕಾಭವನ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟಿ, ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್. ಮನು ಶೆಣೈ (63) ಅವರು ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ವೀರಾಜಪೇಟೆ ‌ನಗರದ ಸುಭಾಷ್ ನಗರದ ನಿವಾಸಿಯಾಗಿದ್ದ ಮನು ಶೆಣೈ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಪ್ರಗತಿಪರ ಚಿಂತಕರೂ ಆಗಿದ್ದ ಶೆಣೈ ಅವರು ಲಂಕೇಶ್ ಪತ್ರಿಕೆಯ ವರದಿಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು.

ನೇರ ಹಾಗೂ ನಿರ್ಭೀತಿಯ ವರದಿಗಾರಿಕೆಗೆ ಹೆಸರಾಗಿದ್ದ ಮನು ಶೆಣೈ ಅವರು ಕೊಡಗಿನ ಹಲವು ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿದ್ದರಲ್ಲದೆ, ಹಲವು ಹೋರಾಟಗಳಿಗೂ ಮುನ್ನುಡಿಯಾಗಿದ್ದರು. ಆರ್ಥಿಕ ಸಂಕಷ್ಟದ ನಡುವೆಯೂ ಜಾಹೀರಾತು ಇಲ್ಲದೆಯೇ ‘ಕೊಡಗು ಸಮಾಚಾರ’ವನ್ನು ಸತತವಾಗಿ ಮುನ್ನಡೆಸಿಕೊಂಡು ಬರುವ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಮಾದರಿಯಾಗಿದ್ದರು.
ಸಂತಾಪ : ಕೊಡಗಿನ ಪತ್ರಕರ್ತರ ತವರು ಮನೆಯಂತಿರುವ ಪತ್ರಿಕಾ ಭವನ ನಿರ್ಮಾಣಕ್ಕೂ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಮನು ಶೆಣೈ ಅವರ ನಿಧನಕ್ಕೆ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂತಾಪ ವ್ಯಕ್ತಪಡಿಸಿದೆ.

ಭಾನುವಾರ ಬೆಳಗ್ಗೆ ಪತ್ರಿಕಾಭವನದಲ್ಲಿ ಸಂತಾಪ ಸಭೆ ನಡೆಸಿದ ಟ್ರಸ್ಟಿಗಳು ಮನು ಅವರ ನಿಧನಕ್ಕೆ ಕಂಬನಿ ಮಿಡಿದರು. ಟ್ರಸ್ಟ್’ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿಗಳಾದ ವಿ.ಪಿ.ಸುರೇಶ್, ಜಿ.ಚಿದ್ವಿಲಾಸ್, ಎಚ್.ಟಿ.ಅನಿಲ್, ಶ್ರೀಧರ ಹೂವಲ್ಲಿ, ಕೆ.ತಿಮ್ಮಪ್ಪ, ಪತ್ರಿಕಾ ಭವನದ ವ್ಯವಸ್ಥಾಪಕಿ ಯಮುನಾ, ಸಿಬ್ಬಂದಿ ಸವಿತಾ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss