May 30, 2026
Saturday, May 30, 2026
spot_img

ಕಟೀಲು ಕ್ಷೇತ್ರದ ಹಿರಿಯ ಸೇವಕ, ವಿದ್ವಾಂಸ ಪಾಂಡುರಂಗ ಭಟ್ ನಿಧನ

ಹೊಸದಿಗಂತ ಕಟೀಲು:

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸತತ 55 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಉದ್ಯೋಗಿ ಹಾಗೂ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಪಾಂಡುರಂಗ ಭಟ್ (75) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ತಾಯಿ (94), ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

55 ವರ್ಷಗಳ ಅವಿರತ ಸೇವೆ

ತಮ್ಮ ೨೦ನೇ ವಯಸ್ಸಿಗೆ ಕಟೀಲು ಕ್ಷೇತ್ರಕ್ಕೆ ಸೇರಿದ್ದ ಪಾಂಡುರಂಗ ಭಟ್ಟರು, ೬೫ನೇ ವಯಸ್ಸಿಗೆ ನಿವೃತ್ತರಾಗಿದ್ದರು. ಆದರೆ, ಅವರ ನಿಸ್ಪೃಹ ಸೇವೆ, ಭಕ್ತರೊಂದಿಗಿನ ಆತ್ಮೀಯತೆ ಮತ್ತು ದೇವಸ್ಥಾನದ ಮೇಲಿನ ಭಕ್ತಿಯನ್ನು ಗೌರವಿಸಿ ಆಡಳಿತ ಮಂಡಳಿಯು ಅವರ ಸೇವೆಯನ್ನು ಮುಂದುವರಿಸಲು ಅವಕಾಶ ನೀಡಿತ್ತು. ಕ್ಷೇತ್ರದ ವಿಚಾರಣೆ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಾ, ದೇಶ-ವಿದೇಶಗಳಿಂದ ಬರುವ ಭಕ್ತರಿಗೆ ಹಾಗೂ ಗಣ್ಯರಿಗೆ ಪ್ರೀತಿಯಿಂದ ಮಾರ್ಗದರ್ಶನ ನೀಡುತ್ತಿದ್ದರು.

ಕಲೆ, ಸಾಹಿತ್ಯ ಮತ್ತು ಪಾಂಡಿತ್ಯ

ಪಾಂಡುರಂಗ ಭಟ್ಟರು ಕೇವಲ ದೇವಸ್ಥಾನದ ಉದ್ಯೋಗಿಯಾಗಿರದೆ ಭಜನಾಕಾರರಾಗಿ, ತಬಲಾ ವಾದಕರಾಗಿ ಹಾಗೂ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕಟೀಲು ಮೇಳದ ಹಿರಿಯ ಕಲಾವಿದರು ಮತ್ತು ಮೂರು ತಲೆಮಾರಿನ ಅರ್ಚಕರೊಂದಿಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿದ್ದರು. ಸಾವಿರಾರು ಪುಸ್ತಕಗಳನ್ನು ಓದಿದ್ದ ಅವರು ಹಳೆಗನ್ನಡ ಕಾವ್ಯ ಹಾಗೂ ದಾಸರ ಪದಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಕ್ಷೇತ್ರಕ್ಕೆ ಬರುವ ಗಣ್ಯರ ಸಾಧನೆ ಮತ್ತು ಕೌಟುಂಬಿಕ ಹಿನ್ನೆಲೆಯನ್ನು ನೆನಪಿಸಿಕೊಂಡು ಸತ್ಕರಿಸುವ ಅದ್ಭುತ ಶಕ್ತಿ ಅವರಿಗಿತ್ತು.

ಮಾನವೀಯತೆಯ ಸಾಕಾರ ಮೂರ್ತಿ

ಕಷ್ಟದಲ್ಲಿದ್ದ ಭಕ್ತರಿಗೆ ಸಾಂತ್ವನ ಹೇಳಿ, ದೇವಸ್ಥಾನದ ಸೇವೆಗಳ ವಿವರ ನೀಡಿ ಧೈರ್ಯ ತುಂಬುತ್ತಿದ್ದರು. ಕಡುಬಡವರಿಗೆ ಆರ್ಥಿಕ ಸಹಾಯ ಹಾಗೂ ಪ್ರಯಾಣದ ವೆಚ್ಚ ನೀಡಿ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇವರ ನಿಧನಕ್ಕೆ ಕಟೀಲು ದೇಗುಲದ ಅರ್ಚಕರಾದ ಆಸ್ರಣ್ಣ ಬಂಧುಗಳು ಮತ್ತು ವಿವಿಧ ರಂಗಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !