May 7, 2026
Thursday, May 7, 2026
spot_img

ತುಮಕೂರಿನಲ್ಲಿ ನವಿಲುಗಳ ಸರಣಿ ಸಾವು: ಪಕ್ಷಿ ಜ್ವರ ದೃಢ, ಬೆಚ್ಚಿಬಿದ್ದ ಗ್ರಾಮಸ್ಥರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಆರಂಭವಾದ ನವಿಲುಗಳ ಸಾವಿನ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 44 ನವಿಲುಗಳು ಬಲಿಯಾಗಿದ್ದು, ಇದೀಗ ಮತ್ತೆ ಸುಣ್ಣಕಲ್ಲು ಕಟ್ಟೆ ಭಾಗದಲ್ಲಿ ಎರಡು ನವಿಲುಗಳ ಕಳೇಬರ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ಏಪ್ರಿಲ್ 16ರಿಂದ 21ರ ಅವಧಿಯಲ್ಲಿ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ 32ಕ್ಕೂ ಹೆಚ್ಚು ನವಿಲುಗಳು ಸಾವನ್ನಪ್ಪಿದ್ದವು. ಆರಂಭದಲ್ಲಿ ತೀವ್ರ ಬಿಸಿಲು ಮತ್ತು ಹೀಟ್ ಸ್ಟ್ರೋಕ್‌ನಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಮೃತ ನವಿಲುಗಳ ಅಂಗಾಂಶಗಳನ್ನು ಪರೀಕ್ಷೆಗಾಗಿ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅವುಗಳಿಗೆ ಹೆಚ್5ಎನ್1 ಸೋಂಕು ಅಂದರೆ ‘ಬರ್ಡ್ ಫ್ಲೂ’ ತಗುಲಿರುವುದು ದೃಢಪಟ್ಟಿದೆ.

ಹೊಸದಾಗಿ ಪತ್ತೆಯಾದ ನವಿಲುಗಳ ಸಾವಿನ ಕಾರಣವನ್ನು ತಿಳಿಯಲು ಅರಣ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾಡಳಿತವು ಈಗಾಗಲೇ ಪೀಡಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯನ್ನು ‘ಕಂಟೈನ್ಮೆಂಟ್ ಜೋನ್’ ಎಂದು ಘೋಷಿಸಿದೆ. ಸುಮಾರು 33 ಗ್ರಾಮಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸತ್ತ ಪಕ್ಷಿಗಳನ್ನು ಮುಟ್ಟದಂತೆ ಹಾಗೂ ಅಸ್ವಾಭಾವಿಕವಾಗಿ ಪಕ್ಷಿಗಳು ಸಾವನ್ನಪ್ಪಿದರೆ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ. ಮಾಂಸ ಸೇವನೆಯ ಕುರಿತೂ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಸರಿಯಾಗಿ ಬೇಯಿಸಿದ ಆಹಾರವನ್ನೇ ಬಳಸುವಂತೆ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !