ಎನ್ಐಎದಿಂದ ಏರ್‌ಗನ್ ತರಬೇತಿ ಪ್ರಕರಣದ ತನಿಖೆಯಾಗಲಿ: ಎಸ್‌ಡಿಪಿಐ

ಹೊಸದಿಗಂತ ವರದಿ ಮಡಿಕೇರಿ:

ಪೊನ್ನಂಪೇಟೆಯಲ್ಲಿ ನಡೆದ ತ್ರಿಶೂಲ ದೀಕ್ಷೆ ಮತ್ತು ಏರ್’ಗನ್ ತರಬೇತಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಮೂಲಕ ತನಿಖೆ ನಡೆಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಅವರು, ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಸಂಘ ಪರಿವಾರ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.
ಪೊನ್ನಂಪೇಟೆ ಶಿಬಿರದ ಆಯೋಜಕರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎನ್‍ಐಎ ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಮಿತಿ ಸದಸ್ಯ ಉಸ್ಮಾನ್ ಮಾತನಾಡಿ, ಕೊಡಗಿನಲ್ಲಿ ಜಮ್ಮಾ ಹಿಡುವಳಿದಾರರಿಗೆ ಪಾರಂಪರಿಕವಾಗಿ ನೀಡಿರುವ ಬಂದೂಕು ವಿನಾಯಿತಿ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಕೋವಿ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರದ ಭಾಗವಾಗಿ ಸಂಘ ಪರಿವಾರ ಬಂದೂಕು ತರಬೇತಿ ನೀಡಿದೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಯೋಜಕರು ಹಾಗೂ ತರಬೇತಿ ನೀಡಲು ಅನುಮತಿ ನೀಡಿದ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಯದರ್ಶಿ ಕಬೀರ್ ಮಾತನಾಡಿ ಬಂದೂಕು ತರಬೇತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದ್ದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದರು.

ಜಿಲ್ಲೆಯಲ್ಲಿ ಧರ್ಮ ಧರ್ಮದ ನಡುವೆ ಒಡಕನ್ನು ಸೃಷ್ಟಿಸುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಿದೆ ಎಂದು ಆರೋಪಿದ ಅವರು, ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪೊನ್ನಂಪೇಟೆ ಪ್ರಕರಣದ ತನಿಖೆಗಾಗಿ ಒತ್ತಾಯಿಸಿ ಮೇ 20 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶಫಿ, ವೀರಾಜಪೇಟೆ ಅಧ್ಯಕ್ಷ ಹನೀಫ್ ಹಾಗೂ ಶರೀಫ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!