Monday, March 27, 2023

Latest Posts

ಕೊಡಗಿನ ಗಡಿಗಳಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಿ: ಟ್ಯಾಕ್ಸಿ ಚಾಲಕರ ಆಗ್ರಹ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಗಡಿ ಭಾಗದಲ್ಲಿ ಸೂಕ್ತ ತಪಾಸಣಾ ಕೇಂದ್ರಗಳು ಇಲ್ಲದಿರುವುದರಿಂದ ತೆರಿಗೆ ವಂಚನೆ ಮಾಡಿ ನಿಯಮ ಬಾಹಿರವಾಗಿ ಅಂತರ ರಾಜ್ಯ ವಾಹನಗಳು ಪ್ರವೇಶ ಮಾಡುತ್ತಿವೆ ಎಂದು ಆರೋಪಿಸಿರುವ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್’ನ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಹೊರ ರಾಜ್ಯಗಳ ಟ್ಯಾಕ್ಸಿಗಳು ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವುದರಿಂದ ಜಿಲ್ಲೆಯ ಟ್ಯಾಕ್ಸಿ ಮಾಲಕರು ಹಾಗೂ ಚಾಲಕರು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತೆರಿಗೆ ನಷ್ಟ: ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ವೀರಾಜಪೇಟೆ ತಾಲೂಕಿನ ಪೆರುಂಬಾಡಿಯಲ್ಲಿ ಸಾರಿಗೆ ಇಲಾಖೆಯ ಚೆಕ್‍ಪೋಸ್ಟ್ (ಆರ್.ಟಿ.ಓ) ಗಳಿಲ್ಲ. ಇದೇ ಕಾರಣದಿಂದ ಕೊಡಗು ಜಿಲ್ಲೆಯ ಮೂಲಕ ಕೇರಳ ಮತ್ತು ಇತರ ರಾಜ್ಯಗಳ ವಾಹನಗಳು ಕರ್ನಾಟಕವನ್ನು ಪವೇಶಿಸುತ್ತಿವೆ. ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ತೆರಿಗೆ ಹಣ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ಪ್ರವಾಸ ಹೋಗುವ ಸಂದರ್ಭ ಅಲ್ಲಿನ ಆರ್‍ಟಿಓ ಚೆಕ್ ಪೋಸ್ಟ್’ಗಳಲ್ಲಿ ಕಡ್ಡಾಯವಾಗಿ ಕೇರಳ ರಾಜ್ಯದ ವಾಣಿಜ್ಯ ತೆರಿಗೆಯನ್ನು ಸಂಗ್ರಹಿಸುತ್ತಾರೆ. ಆದರೆ ಕೇರಳದಿಂದ ವಾಣಿಜ್ಯ ವಾಹನಗಳು ಕರ್ನಾಟಕಕ್ಕೆ ಬಂದಾಗ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟದೆ ಹಿಂತಿರುಗುತ್ತಿವೆ. ತೆರಿಗೆ ವಂಚಿಸಿ ಜಿಲ್ಲೆಯನ್ನು ಪ್ರವೇಶಿಸುತ್ತಿರುವ ವಾಹನಗಳ ಬಗ್ಗೆ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದ ಅವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರದೆ ದಿವ್ಯ ಮೌನಕ್ಕೆ ಶರಣಾಗಿರುವುದು ದುರಾದೃಷ್ಟಕರವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ 15 ದಿನಗಳ ಒಳಗಾಗಿ ಗಡಿ ಭಾಗದಲ್ಲಿ ಆರ್.ಟಿ.ಓ ತಪಾಸಣೆ ಕೇಂದ್ರವನ್ನು ಆರಂಭಿಸಬೇಕು. ತಪ್ಪಿದಲ್ಲಿ ಪೆರುಂಬಾಡಿ, ಕುಟ್ಟ ಅಂತರರಾಜ್ಯ ಗಡಿ ಭಾಗದಲ್ಲಿ ರಸ್ತೆ ರಡೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!