September 24, 2026
Thursday, September 24, 2026
spot_img

ಬೈಕ್ ಏರಿ ಗ್ರಾಮಗಳತ್ತ ಹೊರಟ ‘ಸೇವಾ ಯಾತ್ರಿಕರು’: ‘ಸೇವೆಯಿಂದಲೇ ಸಂದೇಶ ಸಾರಬೇಕು’ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೇವೆಯ ಮನೋಭಾವವನ್ನು ದೇಶದ ಗ್ರಾಮೀಣ ಹಾಗೂ ತಳಮಟ್ಟದ ಜನರೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಆಯೋಜಿಸಿರುವ ‘ಸೇವಾ ಯಾತ್ರೆ’ಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ವಡನಗರದಿಂದ ವಾರಾಣಸಿವರೆಗೆ ಬೈಕ್‌ಗಳಲ್ಲಿ ಸಾಗುತ್ತಿರುವ ಸೇವಾ ಯಾತ್ರಿಗಳೊಂದಿಗೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ, ಜನರ ನಡುವೆ ಸೇವಾ ಚಟುವಟಿಕೆಗಳನ್ನು ನಡೆಸುವಂತೆ ಕರೆ ನೀಡಿದರು.

ಏನಿದು ಸೇವಾ ಯಾತ್ರೆ?

ಸೇವಾ ಯಾತ್ರೆಯ ಭಾಗವಾಗಿ ಒಟ್ಟು 20 ತಂಡಗಳು ಸುಮಾರು 35,500 ಕಿಲೋಮೀಟರ್ ದೂರವನ್ನು ಕ್ರಮಿಸಲಿವೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ನಡೆಯುವ ಈ ಪಯಣ ವಡನಗರದಿಂದ ಆರಂಭವಾಗಿ ವಾರಾಣಸಿ ತಲುಪಿ ಮತ್ತೆ ವಾಪಸಾಗಲಿದೆ. ಮಾರ್ಗಮಧ್ಯೆ ಪಟ್ಟಣಗಳು, ಜಿಲ್ಲೆಗಳು, ತಾಲೂಕುಗಳು ಮತ್ತು ಗ್ರಾಮಗಳಿಗೆ ಭೇಟಿ ನೀಡುವ ಯಾತ್ರಿಕರು ಸ್ಥಳೀಯ ಜನರೊಂದಿಗೆ ಬೆರೆಯುವ ಮೂಲಕ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ನಿಮ್ಮ ಪುಣ್ಯ ಕದಿಯುತ್ತಿದ್ದೇನೆ

ಸೇವಾ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಯಾಣ ಮುಗಿಸಿ ಮರಳುವವರನ್ನು ಗೌರವಿಸುವುದರಿಂದ ಅವರ ಯಾತ್ರೆಯ ಪುಣ್ಯದಲ್ಲಿ ಪಾಲು ದೊರೆಯುತ್ತದೆ ಎಂಬ ಹಳೆಯ ನಂಬಿಕೆ ಇದೆ. ಯಾತ್ರಿಕರಿಗೆ ನಮಸ್ಕರಿಸುವ ಮೂಲಕ ತಾವೂ ಆ ಪುಣ್ಯದ ಅರ್ಧಭಾಗವನ್ನು ‘ಕದಿಯುತ್ತಿದ್ದೇನೆ’ ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

ಸೇವೆ ಕೇವಲ ಭಾಷಣ ಅಥವಾ ಘೋಷಣೆಯಲ್ಲಿ ಸೀಮಿತವಾಗಬಾರದು. ಕಾರ್ಯದ ಮೂಲಕವೇ ಸೇವೆಯ ಸಂದೇಶವನ್ನು ಜನರಿಗೆ ತಲುಪಿಸಬೇಕು ಎಂದು ಮೋದಿ ಹೇಳಿದರು. ‘ಸೇವಾ ಪರಮೋ ಧರ್ಮ’ ಎಂಬ ತತ್ವವನ್ನು ಮುಂದಿಟ್ಟ ಅವರು, ಸಾರ್ವಜನಿಕ ಬದುಕಿನಲ್ಲಿ ಸೇವೆಯೇ ಪ್ರಮುಖ ಗುರಿಯಾಗಬೇಕು ಎಂದು ಹೇಳಿದರು.

ಸೇವಾ ಯಾತ್ರೆಯಲ್ಲಿ ಏನೆಲ್ಲಾ ಯೋಜನೆಗಳಿವೆ?

ಯಾತ್ರೆಯ ವೇಳೆ ಕೆರೆಗಳು, ದೇವಾಲಯಗಳು, ಶಾಲೆಗಳು, ಉದ್ಯಾನಗಳು ಹಾಗೂ ಆಸ್ಪತ್ರೆಗಳ ಸ್ವಚ್ಛತಾ ಕಾರ್ಯ, ಫಲಾನುಭವಿಗಳೊಂದಿಗೆ ಸಂವಾದ, ಯುವಕರೊಂದಿಗೆ ಚರ್ಚೆ, ಗ್ರಾಮಸಭೆಗಳಲ್ಲಿ ಭಾಗವಹಿಸುವಿಕೆ, ಗೋಸೇವೆ ಮತ್ತು ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Must Read