October 20, 2026
Tuesday, October 20, 2026
spot_img

ವಯನಾಡಿನಲ್ಲಿ ಇನ್ನೂ ಏಳು ಮಂದಿಗೆ ಶಿಗೆಲ್ಲಾ ಸೋಂಕು: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ವಯನಾಡು ಜಿಲ್ಲೆಯಲ್ಲಿ ಇನ್ನೂ ಏಳು ಮಂದಿಯಲ್ಲಿ ಶಿಗೆಲ್ಲಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸೋಂಕಿಗೆ ಒಳಗಾಗಿರುವ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಆರೋಗ್ಯ ಇಲಾಖೆ ಸೋಂಕು ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರು ಮತ್ತು ಆಹಾರದ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕೇರಳದಲ್ಲಿ ಈ ಬಾರಿ ಶಿಗೆಲ್ಲಾ ಸೋಂಕಿನ ಪ್ರಕರಣಗಳು ದ್ವಿಗುಣಗೊಂಡಿವೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈ ವರ್ಷ ಇದುವರೆಗೆ ರಾಜ್ಯದಲ್ಲಿ 114 ಮಂದಿಯಲ್ಲಿ ಶಿಗೆಲ್ಲಾ ಸೋಂಕು ದೃಢಪಟ್ಟಿದೆ.

ಕಲುಷಿತ ಆಹಾರ ಮತ್ತು ನೀರಿನ ಮೂಲಕ ಹರಡುವ ಈ ಬ್ಯಾಕ್ಟೀರಿಯಾ ಸೋಂಕಿನ ಹಿನ್ನೆಲೆಯಲ್ಲಿ ಜ್ವರ, ಅತಿಸಾರ, ಹೊಟ್ಟೆ ನೋವು ಅಥವಾ ಮಲದಲ್ಲಿ ರಕ್ತ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

Must Read