ಚಿತ್ರ ಪ್ರಚಾರದ ವೇಳೆ ಲೈಂಗಿಕ ಕಿರುಕುಳ: ಆಘಾತಕಾರಿ ಘಟನೆ ಬಿಚ್ಚಿಟ್ಟ ನಟಿಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಸ್ಯಾಟರ್‌ಡೇ ನೈಟ್‌ ಚಿತ್ರದ ಪ್ರಚಾರಕ್ಕಾಗಿ ಪ್ರವಾಸ ಮಾಡ್ತಿದ್ದಾಗ ಮಲಯಾಳಂ ನಟಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ವರದಿಯಾಗಿದೆ.
ನಟಿಗೆ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಹೊರಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಚಿತ್ರತಂಡ ಪ್ರಮೋಷನ್‌ಗಾಗಿ ಕೋಝಿಕ್ಕೋಡ್‌ನ ಹೈಲೈಟ್‌ ಮಾಲ್‌ಗೆ ಆಗಮಿಸಿತ್ತು. ಈ ವೇಳೆ ನಟ, ನಟಿಯರು ಅಲ್ಲಿಂದ ನಿರ್ಗಮಿಸುವಾಗ ನೂಕು ನುಗ್ಗಲು ಉಂಟಾಯ್ತು. ಸ್ಥಳದಲ್ಲಿ ಕಾಲ್ತುಳಿತ ಕೂಡ ಸಂಭವಿಸಿದೆ. ಜನಸಂದಣಿಯ ನಡುವೆಯೇ ಅವರನ್ನು ಕರೆದೊಯ್ಯುತ್ತಿದ್ದಾಗ ನಟಿಯರಿಗೆ ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ.

ಈ ಬಗ್ಗೆ ಖುದ್ದು ನಟಿಯೇ ವಿವರಗಳನ್ನು ಹಂಚಿಕೊಂಡಿದ್ದಾರೆ. ಮಾಲ್‌ನಲ್ಲಿ ಜನಜಂಗುಳಿಯೇ ಇತ್ತು. ಜನಸಂದಣಿಯನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿ ಹೆಣಗಾಡುತ್ತಿದ್ರು. ಈವೆಂಟ್‌ನ ನಂತರ, ನಾನು ಮತ್ತು ನನ್ನ ಕೋಸ್ಟಾರ್ ಒಬ್ಬರು ಹೊರಟೆವು. ಈ ವೇಳೆ ಕೆಲವರು ನನ್ನ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವಿಪರೀತ ಜನರಿದ್ದಿದ್ದರಿಂದ ಆಕೆಗೆ ಪ್ರತಿಕ್ರಿಯಿಸಲು ಅವಕಾಶ ಸಿಗಲಿಲ್ಲ. ನಾನು ಕೂಡ ಇದೇ ರೀತಿಯ ಸಂದರ್ಭವನ್ನು ಎದುರಿಸಿದೆ. ಆಘಾತಗೊಂಡ ನಾನು ತಕ್ಷಣಕ್ಕೆ ಪ್ರತಿಕ್ರಿಯಿಸಿದೆ ಅಂತಾ ನಟಿ ವೈರಲ್‌ ಆಗಿರೋ ವಿಡಿಯೋ ಬಗ್ಗೆ ಬರೆದುಕೊಂಡಿದ್ದಾರೆ.

ಮತ್ತೋರ್ವ ನಟಿ ಕೂಡ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಸ್ಯಾಟರ್ಡೇ ನೈಟ್‌ ಪ್ರಚಾರದ ಸಮಯದಲ್ಲಿ, ಕೋಝಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಭಯಾನಕ ಅನುಭವವಾಯ್ತು. ಕಿಕ್ಕಿರಿದ ಸ್ಥಳದಿಂದ ನಿರ್ಗಮಿಸುವಾಗ, ಯಾರೋ ನನ್ನನ್ನು ತಬ್ಬಿಕೊಂಡರು. ಆತ ನನ್ನನ್ನು ಎಲ್ಲಿ ಮುಟ್ಟಿದನು ಎಂದು ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ನಾವು ಪ್ರಚಾರಕ್ಕಾಗಿ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದೇವೆ, ಆದರೆ ಇಂತಹ ಅಸಹ್ಯಕರ ಅನುಭವ ಎಂದಿಗೂ ಇರಲಿಲ್ಲ. ನಾನು ಒಂದು ಕ್ಷಣ ನಿಶ್ಚೇಷ್ಟಿತಳಾದೆ ಎಂದು ಬರೆದುಕೊಂಡಿರುವ ನಟಿ, ‘ನಿನ್ನ ಕಾಯಿಲೆ ಮುಗಿದಿದೆಯೇʼ?ಎಂದು ಕಾಮುಕನನ್ನು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!