ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಿಂದ ಶಿರಡಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೋರ್ವ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ರಾಜಸ್ಥಾನದ ಚುರು ಜಿಲ್ಲೆಯ ಸಂದೀಪ್ ಸುಮೇರ್ ಸಿಂಗ್ ಎಂದು ಗುರುತಿಸಲಾಗಿದೆ.ಈ ಘಟನೆ ಶುಕ್ರವಾರ (ಮೇ 2) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿ
ಮಾನದ ಮಹಿಳಾ ಸಿಬ್ಬಂದಿಯಿಂದ ಈ ಕುರಿತಂತೆ ಫೋನ್ ಕರೆ ಸ್ವೀಕರಿಸುತ್ತಿದ್ದಂತೆ ಇಂಡಿಗೋ ಪ್ರತಿನಿಧಿ ಸಂತೋಷ್ ಚೌರೆ ಅವರು ರಹತಾ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ದೂರು ನೀಡಿದರು.
ದೆಹಲಿಯಿಂದ ಶಿರಡಿಗೆ ಇಂಡಿಗೋ ಫ್ಲೈಟ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಂದೀಪ್ ಎರಡು ಬಾರಿ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರು ಎಂದು ಇಂಡಿಗೋ ಸಂಸ್ಥೆಗೆ ಸಂತ್ರಸ್ತ ಮಹಿಳಾ ಸಿಬ್ಬಂದಿ ದೂರು ನೀಡಿದರು. ಈ ಹಿನ್ನೆಲೆ ವಿಮಾನ ಶಿರಡಿಯ ಅಂತಾರಾಷ್ಟ್ರೀಯ ಏರ್ಪೋರ್ಟ್ ತಲುಪುವ ಮುನ್ನವೇ ಸಂಸ್ಥೆಯ ಪ್ರತಿನಿಧಿ ಸಂತೋಷ್ ಚೌರೆ ಅವರು ರಹತಾ ಪೊಲೀಸ್ ಠಾಣೆಗೆ ದೌಡಾಯಿಸಿ ದೂರು ದಾಖಲಿಸಿದರು.
ಈ ದೂರು ಆಧರಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಶಿರಡಿಯ ಉಪ ವಲಯ ಪೊಲೀಸ್ ಅಧಿಕಾರಿ ಶಿರಿಶ್ ವಾಮನೆ ಮಾಹಿತಿ ನೀಡಿದ್ದಾರೆ.