ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ಮಹಿಳಾ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಿರುವ ಕುರಿತು ರಾಷ್ಟ್ರವ್ಯಾಪಿ ಆಕ್ರೋಶದ ವ್ಯಕ್ತಗೊಳ್ಳುತ್ತಿರುವ ನಡುವೆಯೇ ಒಡಿಶಾದ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳಿಬ್ಬರಿಗೆ ಅಲ್ಲಿನ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಆದರೆ, ವಿಷಯ ತಿಳಿದ ತಕ್ಷಣವೇ ಜೂನಿಯರ್ ವೈದ್ಯರುಗಳು ಆತನಿಗೆ ಥಳಿಸಿದ್ದು, ಗಂಭೀರವಾಗಿ ಗಾಯಗೊಂಡ ಆತ ಐಸಿಯು ಸೇರಿದ್ದಾನೆ.
ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯ ತಾಯಿ ಮತ್ತು ಚಿಕ್ಕಮ್ಮ ಶುಕ್ರವಾರ ತಪಾಸಣೆಗಾಗಿ ಹೃದ್ರೋಗ ವಿಭಾಗಕ್ಕೆ ಹೋಗಿದ್ದಾಗ ಆರೋಪಿ ವೈದ್ಯ ಕೃತ್ಯ ಎಸಗಿದ್ದಾನೆ. ಇಬ್ಬರು ಮಹಿಳೆಯರಿಗೆ ಎಕೋಕಾರ್ಡಿಯೋಗ್ರಾಮ್ಗೆ ಸಲಹೆ ನೀಡಲಾಗಿತ್ತು. ಕಾರ್ಡಿಯಾಲಜಿ ಎಂಡಿ ವಿದ್ಯಾರ್ಥಿಯಾಗಿರುವ ಪುರುಷ ವೈದ್ಯ ಇಸಿಜಿ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ವಿಷಯ ತಿಳಿದ ಕಿರಿಯ ವೈದ್ಯರ ಸಂಘದ ಸದಸ್ಯರು ಆರೋಪಿ ವೈದ್ಯನಿಗೆ ಥಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಅದೇ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆಯರು ಆರಂಭದಲ್ಲಿ ಪ್ರಕರಣ ದಾಖಲಿಸಲು ಹಿಂಜರಿದಿದ್ದರು. ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಮಧ್ಯಪ್ರವೇಶಿಸಿ ಹಾಗೆ ಮಾಡಲು ಮನವೊಲಿಸಿದ ನಂತರ ಅವರು ಎಫ್ಐಆರ್ ದಾಖಲಿಸಿದ್ದಾರೆ.
ವೈದ್ಯರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂವರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಆರೋಪಿಯನ್ನು ರೋಗಿಗಳ ಕೆಲವು ಸಂಬಂಧಿಕರು ಥಳಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಸಂಬಂಧ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಕಟಕ್ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ಎಡಿಸಿಪಿ ಅನಿಲ್ ಮಿಶ್ರಾ) ಹೇಳಿದರು.
ಸಿಆರ್ಪಿಸಿಯ ಸೆಕ್ಷನ್ 161 ಮತ್ತು 164 ರ ಅಡಿಯಲ್ಲಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಆಗಸ್ಟ್ 11ರಂದು ಈ ಘಟನೆ ನಡೆದಿದೆ. ಅತ್ಯಾಚಾರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಪ್ರಕರಣವು ಸೂಕ್ಷ್ಮವಾಗಿರುವುದರಿಂದ, ನಾವು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ ಹೆಚ್ಚುವರಿ ಡಿಸಿಪಿ ಅನಿಲ್ ಮಿಶ್ರಾ ಹೇಳಿದ್ದಾರೆ.