ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನಾ ಇತಿಹಾಸದಲ್ಲೇ ಹೊಸ ಮೈಲಿಗಲ್ಲೊಂದಕ್ಕೆ ನಮ್ಮ ದೇಶ ಸಾಕ್ಷಿಯಾಗಿದೆ. ವಾಯುಪಡೆಯ ಅಧಿಕಾರಿ ಏರ್ ವೈಸ್ ಮಾರ್ಷಲ್ (AVM) ಶಕ್ತಿ ಶರ್ಮಾ ಅವರು ಭಾರತೀಯ ರಕ್ಷಣಾ ಪಡೆಗಳ ವೈದ್ಯಕೀಯೇತರ ವಿಭಾಗದಲ್ಲಿ ಈ ಅತ್ಯುನ್ನತ ರ‍್ಯಾಂಕ್ ಪಡೆದ ದೇಶದ ಮೊದಲ ಮಹಿಳಾ ಅಧಿಕಾರಿ ಎಂಬ ದಾಖಲೆ ಬರೆದಿದ್ದಾರೆ.
ಮಂಗಳವಾರದಂದು ಅವರು ವಾಯುಪಡೆ ಪ್ರಧಾನ ಕಚೇರಿಯಲ್ಲಿ ಸಹಾಯಕ ವಾಯುಪಡೆ ಮುಖ್ಯಸ್ಥೆ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದುವರೆಗೆ ಭೂಸೇನೆ ಮತ್ತು ನೌಕಾಸೇನೆಯ ಮೆಡಿಕಲ್ ಅಲ್ಲದ ವಿಭಾಗಗಳಲ್ಲಿ ಮಹಿಳೆಯರು ಗರಿಷ್ಠ ಕರ್ನಲ್ ಅಥವಾ ಅದಕ್ಕೆ ಸಮಾನವಾದ ಹುದ್ದೆಯನ್ನಷ್ಟೇ ತಲುಪಲು ಸಾಧ್ಯವಾಗಿತ್ತು. ಆ ಎಲ್ಲಾ ಮಿತಿಗಳನ್ನು ಮೀರಿ ಶಕ್ತಿ ಶರ್ಮಾ ಈಗ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಶಕ್ತಿ ಶರ್ಮಾ ಅವರ ಅಪರೂಪದ ಸಾಧನೆಗಳು
ತಮ್ಮ ಸುದೀರ್ಘ ಸೇವಾವಧಿಯಲ್ಲಿ ಅವರು ಐಐಟಿ-ಕಾನ್ಪುರ ಮತ್ತು ಪುಣೆ ವಿಶ್ವವಿದ್ಯಾಲಯಗಳಲ್ಲಿ ‘ಐಎಎಫ್ ಚೇರ್ಸ್ ಆಫ್ ಎಕ್ಸಲೆನ್ಸ್’ ಸ್ಥಾಪಿಸುವ ಮೂಲಕ ರಕ್ಷಣಾ ವಲಯದ ಶೈಕ್ಷಣಿಕ ಸಹಭಾಗಿತ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಹಾಗೆಯೇ ದೇಶದ ಮೂರೂ ರಕ್ಷಣಾ ಪಡೆಗಳ ಪೈಕಿ ಸೈನಿಕ ಶಾಲೆಯೊಂದನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಇವರಾಗಿದ್ದಾರೆ. ಇವರು ಕಪುರ್ತಲಾದ ಸೈನಿಕ ಶಾಲೆಯ ಪ್ರಾಂಶುಪಾಲರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು.
ಬದಲಾವಣೆ ತಂದ 2010ರ ಐತಿಹಾಸಿಕ ನಿರ್ಧಾರ
ವಾಯುಪಡೆಯಲ್ಲಿ ಮಹಿಳೆಯರು ಇಷ್ಟು ದೊಡ್ಡ ಹುದ್ದೆಗೇರಲು 2010 ರಲ್ಲಿ ಭಾರತೀಯ ವಾಯುಪಡೆ ತೆಗೆದುಕೊಂಡ ನಿರ್ಧಾರವೇ ಪ್ರಮುಖ ಕಾರಣವಾಗಿದೆ. 2010 ರಲ್ಲಿ ಐಎಎಫ್ ಮಹಿಳಾ ಅಧಿಕಾರಿಗಳಿಗೆ ‘ಪರ್ಮನೆಂಟ್ ಕಮಿಷನ್’ನೀಡಲು ಅಧಿಕೃತವಾಗಿ ಚಾಲನೆ ನೀಡಿತು. ಇದರಿಂದಾಗಿ ಮಹಿಳೆಯರಿಗೆ ಉನ್ನತ ಕೋರ್ಸ್‌ಗಳು ಮತ್ತು ಪ್ರಮೋಷನ್ ಪಡೆಯುವ ದಾರಿ ಸುಲಭವಾಯಿತು.
ಸೇನೆಯಲ್ಲಿ ಹುದ್ದೆಗಳ ಸಂಖ್ಯೆ ತೀರಾ ಸೀಮಿತವಾಗಿರುವುದರಿಂದ ಮತ್ತು ಪೈಪೋಟಿ ತೀವ್ರವಾಗಿರುವುದರಿಂದ ಇಷ್ಟು ವರ್ಷಗಳ ನಂತರ ಒಬ್ಬ ಮಹಿಳಾ ಅಧಿಕಾರಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.
ಇದನ್ನೂ ಓದಿ:
ವಾಯುಪಡೆಯ ಇತರ ಸಾಧಕ ಮಹಿಳೆಯರು
ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರು 2023 ರಲ್ಲಿ ಪಾಕಿಸ್ತಾನದ ಗಡಿಗೆ ಎದುರಾಗಿರುವ ಪಶ್ಚಿಮ ವಲಯದಲ್ಲಿ ಕ್ಷಿಪಣಿ ಸ್ಕ್ವಾಡ್ರನ್ ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಭಾವನಾ ಕಾಂತ್ ಅವರು ಕಳೆದ ತಿಂಗಳಷ್ಟೇ ಗ್ವಾಲಿಯರ್‌ನಲ್ಲಿ ಕಠಿಣವಾದ ‘ಫೈಟರ್ ಕಾಂಬ್ಯಾಟ್ ಲೀಡರ್’ (FCL) ಕೋರ್ಸ್ ಮುಗಿಸಿದ ದೇಶದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಕ್ವಾಡ್ರನ್ ಲೀಡರ್ ಸಾನ್ಯಾ ಅವರು ಇದೇ ವರ್ಷ ಮೇ ತಿಂಗಳಲ್ಲಿ ವಾಯುಪಡೆಯ ಅತ್ಯುನ್ನತ ‘ಕ್ಯಾಟಗರಿ-ಎ ಕ್ವಾಲಿಫೈಡ್ ಫ್ಲೈಯಿಂಗ್ ಇನ್ಸ್ಟ್ರಕ್ಟರ್’ (Cat-A QFI) ಪಟ್ಟ ಧರಿಸಿದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
ಒಟ್ಟಾರೆಯಾಗಿ, ಭಾರತೀಯ ರಕ್ಷಣಾ ವಲಯದಲ್ಲಿ ಹೆಣ್ಣುಮಕ್ಕಳು ಇನ್ಮುಂದೆ ಕೇವಲ ಸೈನಿಕರಷ್ಟೇ ಅಲ್ಲ, ಸೇನೆಯನ್ನು ಮುನ್ನಡೆಸುವ ಅತ್ಯುನ್ನತ ದಂಡನಾಯಕರಾಗಿಯೂ ಬೆಳೆಯಬಹುದು ಎಂಬುದನ್ನು ಶಕ್ತಿ ಶರ್ಮಾ ಸಾಬೀತುಪಡಿಸಿದ್ದಾರೆ.



