ಗೋವಾ ಸ್ವಾತಂತ್ರ್ಯಕ್ಕೆ ಹೋರಾಡಿದ್ದಕ್ಕೆ ಪೋರ್ಚುಗೀಸರಿಂದ ಪಡಬಾರದ ಕಷ್ಟನೋವು ಅನುಭವಿಸಿದ್ದರು ಶಂಬು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ವೃತ್ತಿಯಲ್ಲಿ ಕೃಷಿಕರಾಗಿದ್ದ ಶಂಬು ಸೋನು ಪಲಕ್ಕರ್ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದ್ದಕ್ಕಾಗಿ ಪೋರ್ಚುಗೀಸರಿಂದ ಪಡಬಾರದ ಕಷ್ಟನೋವುಗಳನ್ನು ಅನುಭವಿಸಿದರು.
ಉತ್ತರ ಗೋವಾ ಜಿಲ್ಲೆಯ ಪೊಂಡಾ ತಾಲೂಕಿನ ಖಂಡೇಪರ್ ಗ್ರಾಮದಲ್ಲಿ 1929 ರ ಡಿಸೆಂಬರ್ 7 ರಂದು ಜನಿಸಿದರು. ಮರಾಠಿಯಲ್ಲಿ ಮಾಧ್ಯಮಿಕ ಶಾಲಾ ಹಂತದವರೆಗೆ ಶಿಕ್ಷಣ ಪಡೆದರು. 1952 ರಲ್ಲಿ ಆಜಾದ್ ಗೋಮಾಂತಕ ದಳದ ಸದಸ್ಯರಾಗಿ ಸೇರ್ಪಡೆಗೊಂಡರು. ಅಂದಿನಿಂದ ಪೋರ್ಚುಗೀಸರ ವಿರುದ್ಧ ರಹಸ್ಯ ಸಭೆಗಳಲ್ಲಿ ಭಾಗವಹಿಸಿದರು. ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತೀಯ ರಾಷ್ಟ್ರೀಯ ದಿನಗಳನ್ನು ಆಚರಿಸಿದರು. ಜನರಿಗೆ ಗುಟ್ಟಾಗಿ ರಾಷ್ಟ್ರೀಯತಾವಾದಿ ಕರಪತ್ರಗಳು/ ಪೋಸ್ಟರ್‌ಗಳನ್ನು ಹಂಚಿದರು ಮತ್ತು ಅಂಟಿಸಿದರು. ಹೀಗೆ ಶಂಬುವಿನ ಸ್ವಾತಂತ್ರ್ಯ ಹೋರಾಟಗಳು ಸಾಗುತ್ತಿತ್ತು. 1954 ರ ಡಿಸೆಂಬರ್ 31 ರಂದು (ಪೋರ್ಚುಗೀಸರ ವಶದಲ್ಲಿದ್ದ ಗೋವಾಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ) ಅವರು ರಾಜ್ಯದ ಉತ್ತರ ಭಾಗದಲ್ಲಿರುವ ಬನಾಸ್ತಾರಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು.
ಆ ಬಳಿಕ 1955ರಲ್ಲಿ ಮೋಹನ್ ರಾನಡೆಯವರ ನೇತೃತ್ವದಲ್ಲಿ ಗೋವಾದ ಪಾಲಿ ಮೈನ್ ಮೇಲೆ ಪ್ರದೇಶದಲ್ಲಿ ಪೋರ್ಚುಗೀಸರು ವಾಸವಿದ್ದ ಪ್ರದೇಶದ ಮೇಲೆ ದಾಳಿ ಮಾಡಿದರು. ಆ ವೇಳೆ ಪೋರ್ಚುಗೀಸ್ ನಾಗರಿಕನ ಹತ್ಯೆಯಿಂದ ಕುಪಿತಗೊಂಡ ಪೋರ್ಚುಗೀಸ್ ಪೊಲೀಸ್ ತಂಡವು ಶಂಬುರ ಮನೆಯ ಮೇಲೆ ದಾಳಿ ಮಾಡಿತು. ಆತನ ಸುಳಿವು ಸಿಗದಿದ್ದರೂ ಆತನ ಕುಟುಂಬಸ್ಥರ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದನ್ನು ದಾಳಿ ನಡೆಸಿದ ಪೊಲೀಸರು ದೋಚಿದರು. 1955 ರ ಆಗಸ್ಟ್ 12 ರಂದು ಶಂಬುರನ್ನು ಬಂಧಿಸಿ ಪಣಜಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಸ್ವಾತಂತ್ರ್ಯ ಹೋರಾಟದ ಜೊತೆಗಾರರು ಮಾಹಿತಿ ಮತ್ತು ಪೊಲೀಸ್ ಠಾಣೆಯಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಎಲ್ಲಿ ಬಚ್ಚಿಟ್ಟಿದ್ದಾರೆಂಬ ಮಾಹಿತಿ ನೀಡಿವಂತೆ ಅಲ್ಲಿ ಅವರಿಗೆ ಚಿತ್ರಹಿಂಸೆ ನೀಡಲಾಯಿತು. ಆ ಬಳಿಕ ಅವರನ್ನು TMT (ಪೋರ್ಚುಗೀಸ್ ಮಿಲಿಟರಿ ಟ್ರಿಬ್ಯೂನಲ್) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. 1956 ಡಿಸೆಂಬರ್ 26 ರಂದು ಅವರಿಗೆ 21 ವರ್ಷಗಳ ಜೈಲು ಶಿಕ್ಷೆ ಮತ್ತು ಎರಡು ವರ್ಷಗಳ ಅವಧಿಗೆ ದಿನಕ್ಕೆ 20 ಎಸ್ಕುಡೋಸ್ ದಂಡವನ್ನು ಪಾವತಿಸುವಂತೆ ಶಿಕ್ಷೆ ವಿಧಿಸಲಾಯಿತು. ಇತ್ತ ಭಾರತ ಸ್ವಚ್ಛಂದ ಸ್ವಾತಂತ್ರ್ಯವನ್ನು ಉಸಿರಾಡುತ್ತಿದ್ದರೆ ಅತ್ತ ಭವ್ಯ ಭಾರತದ ಭಾಗವೇ ಆಗಿದ್ದ ಗೋವಾದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಶಂಬು ನಾಗರಿಕ ಹಕ್ಕುಗಳಿಂದ ವಂಚಿತರಾಗಿ ಅಮಾನವೀಯ ಶಿಕ್ಷೆಗೆ ಒಳಗಾಗಬೇಕಾಯಿತು. ಪೋರ್ಚುಇಗೀಸರು ಎಷ್ಟು ಕ್ರೂರಿಗಳೆಂದರೆ ಶಂಬು ಮೇಲಿನ ಸಿಟ್ಟಿಗೆ ಅವರ ತಂದೆ ಮತ್ತು ಸಹೋದರನನ್ನು ಸಹ ಬಂಧಿಸಿ ಜೈಲಿಗೆ ತಳ್ಳಿದ್ದರು.
ಗೋವಾ ವಿಮೋಚನೆಯ ನಂತರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಮತ್ತು ಅವರ ಸ್ವಾತಂತ್ರ್ಯ ಹೋರಾಟವನ್ನು ಗುರುತಿಸಿ ಕೇಂದ್ರ ಸರ್ಕಾರವು 1972 ರಲ್ಲಿ ಅವರಿಗೆ ತಾಮ್ರಪತ್ರವನ್ನು ನೀಡಿ ಗೌರವಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!