ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾಕ್ಕೆ ಮೊಹಮ್ಮದ್ ಶಮಿ ಮಿಂಚಿನ ದಾಳಿ ವರವಾದರೆ, ನ್ಯೂಜಿಲೆಂಡ್ ಗೆ ಡೇರಲ್ ಮಿಚೆಲ್ ಬಾರಿಸಿದ ಆಕರ್ಷಕ ಶತಕ ಹಾಗೂ ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಾಗಿದೆ. ಇದರಿಂದ ಗದಿತ 50 ಓವರ್‌ಗಳಲ್ಲಿ 273 ರನ್ ಬಾರಿಸಿ ಸರ್ವಪತನ ಕಂಡಿದೆ.
ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಲ್ಲೇ ವೇಗಿ ಸಿರಾಜ್, ವಿಕೆಟ್ ಕೀಪರ್ ಬ್ಯಾಟರ್ ಡೆವೊನ್ ಕಾನ್‌ವೇ ಅವರನ್ನು ಬಲಿಪಡೆಯುವಲ್ಲಿ ಯಶಸ್ವಿಯಾದರು. ಮತ್ತೋರ್ವ ಆರಂಭಿಕ ಬ್ಯಾಟರ್ ವಿಲ್ ಯಂಗ್(17) ಅವರನ್ನು ಕ್ಲೀನ್ ಬೌಲ್ಡ್ ಆದರು .
ಕೇವಲ 19 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಮೂರನೇ ವಿಕೆಟ್‌ಗೆ ರಚಿನ್ ರವೀಂದ್ರ ಹಾಗೂ ಡೇರಲ್ ಮಿಚೆಲ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. 87 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 75 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ರಚಿನ್ ರವೀಂದ್ರ ಅವರನ್ನು ಬಲಿ ಪಡೆಯುವಲ್ಲಿ ಶಮಿ ಯಶಸ್ವಿಯದರು.
ಇನ್ನು ನಾಯಕ ಟಾಮ್ ಲೇಥಮ್ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಗ್ಲೆನ್ ಫಿಲಿಫ್ಸ್ ಬ್ಯಾಟಿಂಗ್ 23 ರನ್‌ಗಳಿಗೆ ಸೀಮಿತವಾಯಿತು. ಈ ಇಬ್ಬರನ್ನು ಬಲಿಪಡೆಯುವಲ್ಲಿ ಕುಲ್ದೀಪ್ ಯಾದವ್ ಯಶಸ್ವಿಯಾದರು.
ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯತ ಬ್ಯಾಟಿಂಗ್ ನಡೆಸಿದ ಡೇರಲ್ ಮಿಚೆಲ್ 100 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 5ನೇ ಶತಕ ಸಿಡಿಸಿ ಸಂಭ್ರಮಿಸಿದರು. ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಮಿಚೆಲ್ 127 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 130 ರನ್ ಬಾರಿಸಿ ಶಮಿಗೆ 5ನೇ ಬಲಿಯಾದರು.