Friday, December 8, 2023

Latest Posts

ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣ: ಶಂಕಿತ ಆರೋಪಿ NIA ಬಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಬೆಂಗಳೂರಿನ ಎಟಿಟಿ (Absconder Tracking Team -ATT) ಅಧಿಕಾರಿಗಳು ಬಂಧಿಸಿದ್ದಾರೆ.
ಮೊಹಮ್ಮದ್ ಇಮ್ರಾನ್ ಖಾನ್ ಹಾಜಾ ನಜರ್​​ಭೀಡೆನ್ ಎಂಬಾತ ಬಂಧಿತ ಆರೋಪಿ.

2021ರಲ್ಲಿ ಅಧಿಕೃತ ಹಾಗೂ ಮಾನ್ಯ ದಾಖಲೆಗಳಿಲ್ಲದೆ ಶ್ರೀಲಂಕಾ ಪ್ರಜೆಗಳ ಗುಂಪೊಂದು ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿತ್ತು. ಈ ಸಂಬಂಧ ಗುಪ್ತಚರ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿ, 38 ಶ್ರೀಲಂಕಾ ಪ್ರಜೆಗಳನ್ನು ಅದೇ ವರ್ಷದ ಜೂನ್​ 6ರಂದು ಬಂಧಿಸಿದ್ದರು. ತನಿಖೆಯಲ್ಲಿ ಇವರನ್ನು ಅಕ್ರಮವಾಗಿ ತಮಿಳುನಾಡು ಮತ್ತು ಬೆಂಗಳೂರು ಮೂಲಕ ಮಂಗಳೂರಿಗೆ ಕರೆತರಲಾಗಿತ್ತು ಎಂದು ಬಯಲಾಗಿತ್ತು.

ತಮಿಳುನಾಡಿನ ರಾಮನಾಥಪುರಂ ನಿವಾಸಿಯಾದ ಇಮ್ರಾನ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದೂ ಪತ್ತೆ ಹಚ್ಚಲಾಗಿತ್ತು. ಆದರೆ, ಅಂದಿನಿಂದಲೂ ಈತ ಪರಾರಿಯಾಗಿದ್ದ. ಹೀಗಾಗಿ ಕಳೆದ ಹಲವು ತಿಂಗಳುಗಳಿಂದ ಆತನ ಚಲನವಲನಗಳ ಮೇಲೆ ಬೆಂಗಳೂರಿನ ಎಟಿಟಿ ನಿಗಾ ಇರಿಸಿತ್ತು. ಇದೀಗ ತಮಿಳುನಾಡಿನ ಥೇಣಿ ಜಿಲ್ಲೆಯ ಅಜ್ಞಾತ ಸ್ಥಳದಿಂದ ಆರೋಪಿಯನ್ನು ಸೆರೆಹಿಡಿಯಲಾಗಿದೆ.

ಇಮ್ರಾನ್ ಖಾನ್ ಈ ಹಿಂದೆ ಎಲ್‌ಟಿಟಿಇಯೊಂದಿಗೆ ನಂಟು ಹೊಂದಿದ್ದ ಶ್ರೀಲಂಕಾದ ಪ್ರಜೆ ಈಸನ್‌ನ ಸಹಯೋಗದೊಂದಿಗೆ 38 ಶ್ರೀಲಂಕಾ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ತಮಿಳುನಾಡಿನ ವಿವಿಧ ಸ್ಥಳಗಳಿಗೆ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಿದ್ದ ಎಂಬುದು ಬಹಿರಂಗವಾಗಿದೆ. ಕೆನಡಾಕ್ಕೆ ವಲಸೆ ಹೋಗಲು ಕಾನೂನುಬದ್ಧ ದಾಖಲಾತಿಗಳು ಕಲ್ಪಿಸಿ ಉದ್ಯೋಗ ಒದಗಿಸುವ ಸುಳ್ಳು ಭರವಸೆಯ ಮೇಲೆ ಶ್ರೀಲಂಕಾ ಪ್ರಜೆಗಳಿಗೆ ವಂಚಿಸಲಾಗಿತ್ತು.

ನಂತರ ಇಮ್ರಾನ್ ಖಾನ್, ಇತರ ಸಹ ಆರೋಪಿಗಳೊಂದಿಗೆ ಅವರನ್ನು ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಸಾಗಿದ್ದ. ಈತ ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆಯ ಪಿತೂರಿಯಲ್ಲಿ ಪ್ರಮುಖ ಆರೋಪಿಯಾಗಿದ್ದು, ಶ್ರೀಲಂಕಾದ ಪ್ರಜೆಗಳನ್ನು ಅವರ ತಾಯ್ನಾಡಿನಿಂದ ಭಾರತಕ್ಕೆ ಮತ್ತು ನಂತರ ಇತರ ರಾಷ್ಟ್ರಗಳಿಗೆ ಸಾಗಿಸುವ ದಂಧೆಯಲ್ಲಿ ತೊಡಗಿದ್ದ ಎಂದು ಎನ್​ಐಎ ತಿಳಿಸಿದೆ.

nia

ಈ ಪ್ರಕರಣದಲ್ಲಿ ಐದು ದಿನಕರನ್ ಅಲಿಯಾಸ್​ ಅಯ್ಯ, ಕಾಸಿ ವಿಶ್ವನಾಥನ್, ರಸೂಲ್, ಸತಂ ಉಷೇನ್ ಮತ್ತು ಅಬ್ದುಲ್ ಮುಹೀತು ವಿರುದ್ಧ ಎನ್‌ಐಎ 2021ರಲ್ಲಿ ಪ್ರಾಥಮಿಕ ಚಾರ್ಜ್​ಶೀಟ್​ ಸಲ್ಲಿಸಿತ್ತು. ಇಲ್ಲಿಯವರೆಗೆ ಒಟ್ಟಾರೆ 13 ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನೂ ಹಚ್ಚಿನ ತನಿಖೆ ಮುಂದುವರೆದಿದೆ ಎಂದು ಪತ್ರಿಕಾ ಹೊರಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!