ಶಾಂಘೈ ಸಹಕಾರ ಸಂಸ್ಥೆ ಸಮ್ಮೇಳನ: ವ್ಲಾಡಿಮಿರ್‌ ಪುಟಿನ್ ರನ್ನು ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ಸಾಂಕ್ರಾಮಿಕದ ನಂತರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್‌ಕಂಡ್‌ ನಗರವು ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ದ ಶೃಂಗ ಸಭೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಎಸ್‌ಸಿಒದ ಇತರ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಲು ಈಗಾಗಲೇ ಉಜ್ಬೇಕಿಸ್ತಾನಕ್ಕೆ ಬಂದಿಳಿದಿದ್ದಾರೆ. ಈಗಾಗಲೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್ ನಡುವಿನ ಮೊದಲ ವೈಯಕ್ತಿಕ ಭೇಟಿಯು ಪೂರ್ಣಗೊಂಡಿದ್ದು ಭಾರತದ ಪ್ರಧಾನಿ ಮೋದಿಯವರು ಇಂದು ರಷ್ಯಾದ ಅಧ್ಯಕ್ಷ ಪುಟಿನ್‌ ಅವರನ್ನು ವೈಯುಕ್ತಿಕವಾಗಿಯೂ ಭೇಟಿ ಮಾಡಲಿದ್ದಾರೆ.

ಉಕ್ರೇನ್‌ ಸಂಘರ್ಷದ ನಂತರ ಪಾಶ್ಚಿಮಾತ್ಯ ಶಕ್ತಿಗಳಿಗೆ ಪರ್ಯಾಯವಾಗಿ ವ್ಲಾಡಿಮಿರ್‌ ಪುಟಿನ್‌ ಇನ್ನೊಂದು ʼಶಕ್ತಿ ಬಣʼ ರಚಿಸಲು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಚೀನಾ ಮತ್ತು ರಷ್ಯಾ ನಡುವೆ ಬೆಳೆಯುತ್ತಿರುವ ಅನ್ಯೋನ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಯವರು ಪ್ರಸ್ತುತ ಸನ್ನಿವೇಶದಲ್ಲಿ ಭಾರತವನ್ನು ಹೇಗೆ ಸ್ಥಾನೀಕರಿಸುತ್ತಾರೆ ಎಂಬುದು ಈ ಸಭೆಯ ಆಸಕ್ತಿಕರ ಅಂಶಗಳಲ್ಲೊಂದಾಗಿದೆ.

ಸಮರ್ಕಂಡ್‌ ಶೃಂಗ ಸಭೆಯ ನಂತರ ಇರಾನ್ ಅನ್ನು ಔಪಚಾರಿಕವಾಗಿ SCO ಗೆ ಸೇರ್ಪಡೆಗೊಳಿಸಲಾಗುತ್ತದೆ. ಭಾರತವು ಮಧ್ಯ ಏಷ್ಯಾದ ರಾಷ್ಟ್ರಗಳ ಪ್ರಭಾವಿ ಗುಂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ ಎನ್ನಾಲಾಗಿದೆ. ಶಾಂಘೈ ಸಹಕಾರ ಸಂಸ್ಥೆಯು (SCO) ಚೀನಾ, ರಷ್ಯಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಭಾರತ ಮತ್ತು ಪಾಕಿಸ್ತಾನವನ್ನು ಒಳಗೊಂಡಿರುವ ಭದ್ರತಾ ಗುಂಪಾಗಿದ್ದು ಬೀಜಿಂಗ್ ಇದರ ಪ್ರಧಾನ ಕಚೇರಿಯಾಗಿದೆ. ಇತ್ತಿಚೆಗೆ ಇರಾನ್‌ ಕೂಡ ಈ ಗುಂಪಿಗೆ ಸೇರ್ಪಡೆಗೊಳ್ಳಲಿದೆ.

ಈ ಶೃಂಗ ಸಭೆಯ ಕುರಿತು ನೀವು ಗಮನಹರಿಸಬೇಕಾದ ಕೆಲ ಅಂಶಗಳು ಇಲ್ಲಿವೆ.

  • ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್‌ಕಂಡ್ ವಿಮಾನ ನಿಲ್ದಾಣದಲ್ಲಿ ಉಜ್ಬೆಕ್ ಪ್ರಧಾನಿ ಅಬ್ದುಲ್ಲಾ ಆರಿಪೋವ್, ಸಚಿವರು, ಸಮರ್‌ಕಂಡ್ ಪ್ರದೇಶದ ಗವರ್ನರ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದ್ದು ಅವರು SCO ಶೃಂಗಸಭೆಗೆ ತೆರಳುವ ಮೊದಲು, ಪ್ರಧಾನ ಮಂತ್ರಿ ಅವರು “ವಿಶಾಲ ಶ್ರೇಣಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಜೊತೆಗೆ ಬಹುಮುಖಿ ಮತ್ತು ಪರಸ್ಪರ ಪ್ರಯೋಜನಕಾರಿ ಸಹಕಾರದ ವಿಸ್ತರಣೆ ಮತ್ತು ಈ ಗುಂಪನ್ನು ಮತ್ತಷ್ಟು ಆಳವಾಗಿಸುವ ಕುರಿತು ಅಭಿಪ್ರಾಯಗಳ ವಿನಿಮಯವನ್ನು ಎದುರು ನೋಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
  • ಕ್ರೆಮ್ಲಿನ್‌ ಪ್ರಕಟಣೆಯ ಪ್ರಕಾರ ಶೃಂಗ ಸಭೆಯ ನಂತರ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವೈಯುಕ್ತಿಕವಾಗಿ ಭೇಟಿ ಮಾಡಲಿದ್ದು ವ್ಯೂಹಾತ್ಮಕ ಸ್ಥಿರತೆ, ಏಷ್ಯಾ ಪೆಸಿಫಿಕ್ ಪ್ರದೇಶದ ಪರಿಸ್ಥಿತಿ ಮತ್ತು ಯುಎನ್ ಮತ್ತು ಜಿ 20 ಒಳಗೆ ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.
  • ಉಜ್ಬೆಕಿಸ್ತಾನದ ಅಧ್ಯಕ್ಷ ಶವಕತ್ ಮಿರ್ಜಿಯೊಯೆವ್ ಅವರೊಂದಿಗೆ ಇತರ ನಾಯಕರ ಜೊತೆ ದ್ವಿಪಕ್ಷೀಯ ಸಭೆಯನ್ನು ಮೋದಿ ನಡೆಸುವ ನಿರೀಕ್ಷೆಯಿದೆ. “ಉಜ್ಬೆಕ್ ಅಧ್ಯಕ್ಷರ ಅಡಿಯಲ್ಲಿ, ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಹಲವಾರು ನಿರ್ಧಾರಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ” ಎಂದು ಪ್ರಧಾನಿ ತಮ್ಮ ನಿರ್ಗಮನದ ಪೂರ್ವ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳ ವರದಿ ತಿಳಿಸಿದೆ.
  • ಇರಾನ್ ಮಾಧ್ಯಮಗಳ ವರದಿಗಳ ಪ್ರಕಾರ ಮೋದಿಯವರು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ. SCO ಶೃಂಗಸಭೆಯು ಎರಡು ಅವಧಿಗಳನ್ನು ಹೊಂದಿದ್ದು ಮೊದಲನೇಯ ಅವಧಿಯು ನಿರ್ಬಂಧಿತ ಅಧಿವೇಶನವಾಗಿದ್ದು SCO ಸದಸ್ಯ ರಾಷ್ಟ್ರಗಳಿಗೆ ಮಾತ್ರ ಮೀಸಲಾಗಿದೆ ಮತ್ತು ನಂತರ ವೀಕ್ಷಕರು ಮತ್ತು ಅಧ್ಯಕ್ಷ ರಾಷ್ಟ್ರದ ವಿಶೇಷ ಆಹ್ವಾನಿತರ ಭಾಗವಹಿಸುವಿಕೆಗಾಗಿ ವಿಸ್ತೃತ ಅಧಿವೇಶನ ನಡೆಯಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!