July 17, 2026
Friday, July 17, 2026
spot_img

ಭಾರೀ ಮಳೆಗೆ ನದಿಯಲ್ಲಿ ತೇಲಿಹೋದ ಸಾವಿರಾರು ಎಲ್‌ಪಿಜಿ ಸಿಲಿಂಡರ್‌ಗಳು: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಾತಾಳಗಂಗಾದಲ್ಲಿರುವ ಹೆಚ್‌ಪಿಸಿಎಲ್ (HPCL) ಎಲ್‌ಪಿಜಿ ಗ್ಯಾಸ್ ಪ್ಲಾಂಟ್‌ಗೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ.

ಆತಂಕ ಮೂಡಿಸಿದ ಕೆಂಪು ಸಿಲಿಂಡರ್‌ಗಳು

ಗ್ಯಾಸ್ ಸಿಲಿಂಡರ್‌ಗಳು ಪಾತಾಳಗಂಗಾ ನದಿ ಮತ್ತು ಹತ್ತಿರದ ಖಾರ್ಪಾಡಾ ಕ್ರೀಕ್‌ಗೆ ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿಹೋದ ಸಿಲಿಂಡರ್‌ಗಳಲ್ಲಿ ಗ್ಯಾಸ್ ತುಂಬಿದ ಮತ್ತು ಖಾಲಿ ಇರುವ ಎರಡೂ ತರಹದ ಸಿಲಿಂಡರ್‌ಗಳು ಸೇರಿವೆ. ಯಾವ ಸಿಲಿಂಡರ್‌ನಲ್ಲಿ ಗ್ಯಾಸ್ ಇದೆ ಎಂದು ತಕ್ಷಣಕ್ಕೆ ತಿಳಿಯದ ಕಾರಣ ಇದು ದೊಡ್ಡ ಭದ್ರತಾ ಆತಂಕವನ್ನು ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೂರಾರು ಕೆಂಪು ಎಲ್‌ಪಿಜಿ ಸಿಲಿಂಡರ್‌ಗಳು ನದಿಯ ನೀರಿನಲ್ಲಿ ತೇಲುತ್ತಾ ಸಾಗುತ್ತಿರುವ ದೃಶ್ಯ ಕಂಡುಬಂದಿದೆ. ಹತ್ತಿರದ ಸೇತುವೆಯ ಮೇಲಿಂದ ಜನರು ಈ ಭಯಾನಕ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋಗಳು ಸಖತ್ ವೈರಲ್ ಆಗಿವೆ.

ಇದನ್ನೂ ಓದಿ:

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಎಚ್ಚರಿಕೆ

ನದಿಯಲ್ಲಿ ಅಥವಾ ದಡದಲ್ಲಿ ಸಿಗುವ ಯಾವುದೇ ಸಿಲಿಂಡರ್‌ಗಳನ್ನು ಸಾರ್ವಜನಿಕರು ಮುಟ್ಟಬಾರದು, ಸಂಗ್ರಹಿಸಬಾರದು ಅಥವಾ ಮನೆಗೆ ಕೊಂಡೊಯ್ಯಬಾರದು ಎಂದು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವಳೆ ಜನರಲ್ಲಿ ಮನವಿ ಮಾಡಿದ್ದಾರೆ. ಹೀಗೆ ಮಾಡುವುದರಿಂದ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ. ಸಿಕ್ಕಿದ ಸಿಲಿಂಡರ್‌ಗಳನ್ನು ತಕ್ಷಣವೇ ಹೆಚ್‌ಪಿಸಿಎಲ್ ಅಥವಾ ಸ್ಥಳೀಯ ಆಡಳಿತಕ್ಕೆ ಒಪ್ಪಿಸುವಂತೆ ಅವರು ಕೋರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !