ಹೊಸದಿಗಂತ ವರದಿ ತುಮಕೂರು:
ಪಾವಗಡದ ಶಾರದಾದೇವಿ ಆಸ್ಪತ್ರೆಯಿಂದ ಮಕ್ಕಳಿಗಾಗಿ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, 146 ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.
ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಶಿಬಿರ ಹಮ್ಮಿಕೊಂಡಿದ್ದ, 146 ಶಿಶುಗಳು ಹಾಗೂ ಮಕ್ಕಳಿಗೆ ನೇತ್ರ ತಜ್ಞರಾದ ಡಾ||ವಸುಧಾ ನರೇಶ್ ಚಿಕಿತ್ಸೆ ನೀಡಿದ್ದಾರೆ.
ಮಕ್ಕಳ ನೇತ್ರ ತಜ್ಞರಾದ ಡಾ.ಆರ್ಯಶೇಖರ್ ಭಾಗವಹಿಸಿದ್ದರು. ಈ ಶಿಬಿರಕ್ಕೆ ವೈ.ಎನ್.ಹೊಸಕೋಟೆ, ಮಧುಗಿರಿ, ಚಳ್ಳಕೆರೆ, ಪಾವಗಡ, ವೈ.ಎನ್.ಹಳ್ಳಿ, ಲಿಂಗದಹಳ್ಳಿ ಮುಂತಾದ ಭಾಗಗಳಿಂದ ಮಕ್ಕಳನ್ನು ಕರೆತರಲಾಗಿತ್ತು. ಶಿಬಿರದಲ್ಲಿ ಆರು ತಿಂಗಳಿನ ಮಗುವಿನಿಂದ ಹಿಡಿದು 12 ವರ್ಷದ ಮಕ್ಕಳವರೆಗೆ ಅನೇಕ ರೀತಿಯ ಕಣ್ಣಿನ ದೋಷಗಳೊಂದಿಗೆ ತಾಯಂದಿರು ತಮ್ಮ ಶಿಶುಗಳನ್ನು ಕರೆತಂದಿದ್ದರು.
ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ರೀತಿಯ ಕಣ್ಣಿನ ಪೊರೆ, ಮೆಳ್ಳಗಣ್ಣು, ಸಣ್ಣ ಕಣ್ಣು, ಮಿಸುಕಾಡುವ ಕಣ್ಣು ಮತ್ತು ದೃಷ್ಟಿದೋಷವುಳ್ಳ ಕಣ್ಣುಗಳ ದೋಷಕ್ಕೆ ವೈದ್ಯರು ಚಿಕಿತ್ಸೆನೀಡಿದರು.
ಒಟ್ಟಿನಲ್ಲಿ ಎರಡು ತಿಂಗಳಿಗೊಮ್ಮೆ ಈ ತೆರನಾದ ಶಿಶು ಹಾಗೂ ಮಕ್ಕಳ ನೇತ್ರ ತಪಾಸಣೆಯಿಂದ ನೂರಾರು ಮಕ್ಕಳಿಗೆ ಮಹಾನಗರದಲ್ಲಿ ದೊರೆಯುವಂತಹ ಅಥವಾ ಅದಕ್ಕಿಂತಲೂ ಮಿಗಿಲಾದ ತಪಾಸಣೆ, ಚಿಕಿತ್ಸಾ ವಿಧಾನಗಳು ಪಾವಗಡದಲ್ಲಿ ದೊರೆತಂತಾಯಿತು. ಈ ಶಿಬಿರದ ಉಸ್ತುವಾರಿಯನ್ನು ಸ್ವಾಮಿ ಜಪಾನಂದಜೀ ವಹಿಸಿದ್ದರು.