ಶರಣ ಸಂಸ್ಕೃತಿ ಎಂದರೆ ಸಮಾಜದಲ್ಲಿ ಪರಿವರ್ತನೆ: ವೈದ್ಯ ಡಾ.ಅವಿನಾಶ್ ಕವಿ

ಹೊಸದಿಗಂತ ವರದಿ, ಚಿತ್ರದುರ್ಗ

ಶರಣ ಸಂಸ್ಕೃತಿ ಎಂದರೆ ವ್ಯಕ್ತಿ ವ್ಯಕ್ತಿತ್ವದಲ್ಲಿ ಬದಲಾವಣೆ. ನಂತರ ಸಮಾಜದಲ್ಲಿ ಪರಿವರ್ತನೆ. ಹಾಗಾದಾಗ ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದು ಬೆಳಗಾವಿಯ ವೈದ್ಯರಾದ ಡಾ.ಅವಿನಾಶ್ ಕವಿ ಅಭಿಪ್ರಾಯಪಟ್ಟರು.

ಇಲ್ಲಿನ ಮುರುಘಾಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಆಯೋಜಿಸಿದ್ದ ಬಸವತತ್ತ್ವ ಸಮಾವೇಶದಲ್ಲಿ ’ಶರಣ ಸಂಸ್ಕೃತಿ ನಡೆದು ಬಂದ ದಾರಿ’ ವಿಷಯ ಕುರಿತು ವಿಷಯಾವಲೋಕನ ಮಾಡಿ ಅವರು ಮಾತನಾಡಿದರು.

ಶರಣರ ಆಶಯ ಸಮ ಸಮಾಜದ ಆಶಯವಾಗಿತ್ತು. ಗುರುತ್ವ ಎಂದೂ ಜಾತಿಯನ್ನು ಅವಲಂಭಿಸಿಲ್ಲ. ಜಂಗಮವೂ ಸಹ ಅದೊಂದು ಗುರು. ಕರ್ನಾಟಕದ ಅನೇಕ ಕಡೆ ಶರಣರು ನಡೆದಾಡಿದ ಕುರುಹುಗಳು ಸಿಗುತ್ತವೆ. ಶರಣ ಸಂಸ್ಕೃತಿಯನ್ನು ಒಪ್ಪಿಕೊಳ್ಳುವಂತಹ ಕೆಲಸವಾಗಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು. ನಮ್ಮ ಮಕ್ಕಳಿಗೆ ಶರಣ ಸಂಸ್ಕೃತಿಯ ಪರಿಚಯ ಮಾಡಬೇಕು. ಶರಣರ ತ್ಯಾಗಬಲಿದಾನಗಳು ನಿರರ್ಥಕವಾಗಬಾರದು. ಅವರನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಕೆಲಸವಾಗಬೇಕಿದೆ ಎಂದು ನುಡಿದರು.
೧೨ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ವೈಚಾರಿಕ ಕ್ರಾಂತಿಯ ಉದಯವಾಯಿತು. ಬಸವಾದಿ ಶರಣರು ಸಮುದ್ರದಲ್ಲೂ ಮಳೆ ಕಂಡಿದ್ದಾರೆ. ಇದು ಹುಟ್ಟಿದ್ದು ಕ್ರಾಂತಿಯಾಗಿದೆ. ಕಾರಣ ಸಮಾನತೆಯ ಅವಕಾಶಕ್ಕಾಗಿ. ಕ್ರಾಂತಿಯಾಗಿ ಧರ್ಮವಾಗಿ ಕೊನೆಗೆ ಸಂಸ್ಕೃತಿಯಾಗಿ ರೂಪುಗೊಂಡಿತು. ಅಂಧ ಶ್ರದ್ಧೆ ಹೊಡೆದೊಡಿಸಿ ದಯವೇ ಧರ್ಮವೆಂದು ಹೇಳಿದ್ದು ಬಸವ ಸಂಸ್ಕೃತಿ ಎಂದು ಹೇಳಿದರು.

ಜಂಗಮತ್ವವನ್ನು ಸಾರಿದ ಧರ್ಮ. ಇದು ಸಮಾನತೆಯ ಸಂಸ್ಕೃತಿ. ಬಾಹ್ಯ ಜ್ಞಾನಗಳನ್ನು ಪರಿಚಯಿಸುವ ಸಂಸ್ಕೃತಿಯಾಗಿದೆ. ಇಷ್ಟಲಿಂಗದಿಂದ ಇಲ್ಲಿಯವರೆಗೆ ಉಳಿದುಕೊಂಡು ಬಂದಿದೆ. ಸಾಮಾಜಿಕ ಸಬಲೀಕರಣದ ಕುರುಹು ಇದು ಕಾಯಕ ಸಂಸ್ಕೃತಿ. ಇದು ಅನುಭಾವ ಸಂಸ್ಕೃತಿ. ಅದುವೇ ಅನುಭವ ಮಂಟಪವಾಯಿತು ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಹೆಚ್‌ತಿಪ್ಪಾರೆಡ್ಡಿ ಮಾತನಾಡಿ, ಬಸವಣ್ಣನವರ ತತ್ತ್ವಗಳನ್ನು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಅಳವಡಿಸಿಕೊಂಡರೆ ಅನೇಕ ಕಾನೂನುಗಳು ನಮಗೆ ಬೇಕಿಲ್ಲ. ನಾವು ಬಸವತತ್ತ್ವ್ವವನ್ನು ಹೇಳುವುದೇ ಒಂದು. ನಡೆದುಕೊಳ್ಳುವುದೇ ಒಂದು. ಶರಣ ಸಂಸ್ಕೃತಿ ಉತ್ಸವದಲ್ಲಿ ಅನೇಕ ಚಿಂತನೆಗಳನ್ನು ಬಿತ್ತುತ್ತಿದ್ದರು ಎಂದು ಹೇಳಿದರು.

ಬಾಗಲಕೋಟೆ ಬಸವಕೇಂದ್ರದ ಅಶೋಕ ಬರಗುಂಡಿ ಮಾತನಾಡಿ, ಈ ಧರ್ಮವೇ ಅದ್ಭುತ. ಬಸವತತ್ತ್ವ ಒಂದು ಬೋಧನೆಯಲ್ಲ. ಬೌದ್ದಿಕ ತಿಳುವಳಿಕೆಯ ಜೊತೆಗೆ ನೈತಿಕ ಮಾರ್ಗವನ್ನು ಹಾಕಿಕೊಟ್ಟಿತು. ಬಸವ ಧರ್ಮ ಬದುಕುವವರಿಗೆ ಅವಕಾಶ ನೀಡಿತು. ಭಿನ್ನ ಭಾವವಿಲ್ಲದೇ ನಮ್ಮ ಧರ್ಮ ಬೆಳೆಸಿತು. ಶರಣ ಸಂಸ್ಕೃತಿಯನ್ನು ಉತ್ಸವವಾಗಿಸದೆ ಬದುಕನ್ನು ಕಲಿಸುವ ಉತ್ಸವವಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ತಿಪಟೂರು ಶ್ರೀ ಷಡಕ್ಷರಿ ಮಠದ ರುದ್ರಮುನಿ ಸ್ವಾಮಿಗಳು, ಚಿತ್ರದುರ್ಗ – ಬಾಗಲಕೋಟೆ ಶ್ರೀ ಭೋವಿ ಗುರುಪೀಠದ ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು, ಶರಣ ಸಂಸ್ಕೃತಿ ಉತ್ಸವ-೨೦೨೩ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮಿಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಶ್ರೀಮುರುಘಾಮಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ, ಎಸ್.ಜೆ.ಎಂ. ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಾಧಿಕಾರಿ ಎಂ.ಭರತ್‌ಕುಮಾರ್, ಶರಣ ಸಂಸ್ಕೃತಿ ಉತ್ಸವ-೨೦೨೩ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಚಲನಚಿತ್ರ ನಟ ದೊಡ್ಡಣ್ಣ, ಬೆಂಗಳೂರು ಬಸವಕೇಂದ್ರದ ಡಿ.ಟಿ.ಅರುಣ್‌ಕುಮಾರ್, ಧಾರವಾಡ ಬಸವಕೇಂದ್ರದ ಈಶ್ವರ ಸಾಣಿಕೊಪ್ಪ, ಜಮಖಂಡಿ ಬಸವಕೇಂದ್ರದ ರವಿ ಎಡೆಹಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ ಹಾಗೂ ಚಳ್ಳಕೆರೆ ವೀರಶೈವ ಮಹಿಳಾ ಸಮಾಜದವರು ವಚನ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕೆ.ಎಂ.ವೀರೇಶ್ ಸ್ವಾಗತಿಸಿ, ಡಾ.ಬಸವಕುಮಾರ ಸ್ವಾಮಿಗಳು ನಿರೂಪಿಸಿದರು.

ಚಿತ್ರದುರ್ಗದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯ, ಎಸ್.ಜೆ.ಎಂ. ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!