ಹೊಸದಿಗಂತ ವರದಿ ಮಂಗಳೂರು:
ನಗರದಲ್ಲಿ ಶನಿವಾರ ಸಂಭವಿಸಿದ ‘ಕುಕ್ಕರ್ ಬಾಂಬ್’ ಸ್ಫೋಟದ ಆರೋಪಿ ಮುಹಮ್ಮದ್ ಶಾರೀಕ್ ನ.10 ರಂದು ಮಂಗಳೂರಿಗೆ ಭೇಟಿ ನೀಡಿ, ತೆರಳಿದ್ದ. ಬಳಿಕ ಮೈಸೂರಿನಿಂದ ಶನಿವಾರ ಮತ್ತೆ ಆಗಮಿಸಿದ್ದಾನೆ. ಮೈಸೂರಿನ ಆತನ ಬಾಡಿಗೆ ಮನೆಯಲ್ಲಿ 150 ಬೆಂಕಿಪೆಟ್ಟಿಗೆ, ಬ್ಯಾಟರಿ, ನೆಟ್, ಬೋಲ್ಟ್, ಸಲ್ಫೇಟ್, ಪಾಸ್ಪರಸ್ ಮುಂತಾದ ವಸ್ತುಗಳು ದೊರಕಿವೆ. ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳ ಪ್ರೇರಣೆಯಿಂದ ಈ ಕೃತ್ಯ ಎಸಗಲಾಗಿದೆ. ಆದರೆ, ಆಟೋ ರಿಕ್ಷಾದಲ್ಲಿ ಬಾಂಬ್ ಸ್ಪೋಟಗೊಂಡ ಕಾರಣ ದೊಡ್ಡ ಅನಾಹುತ ತಪ್ಪಿದೆ ಎಂದು ಎಂದು ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಸುಟ್ಟ ಗಾಯಗಳಾಗಿವೆ. ಶಂಕಿತ ಉಗ್ರ ಶಾರೀಕ್‌ಗೆ ಶೇ. 45 ರಷ್ಟು ಸುಟ್ಟ ಗಾಯಗಳಾಗಿವೆ. ಶಾರೀಕ್ ಸಂಬಂಧಿಕರು ಆತನ ಗುರುತು ಪತ್ತೆ ಹಚ್ಚಿದ ಬಳಿಕ ಅವರ ಬಳಿ ನಾವು ಮಾತನಾಡಿದ್ದೇವೆ. ನಾವು ಶಾರೀಕ್‌ಗೆ ಬುದ್ದಿ ಮಾತು ಹೇಳಿದ್ದೇವೆ. ಆತ ಕೇಳಿಸಿಕೊಂಡಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಸದ್ಯ ಶಾರೀಕ್ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆತನನ್ನು ಬದುಕಿಸಲು ಗರಿಷ್ಠ ಪ್ರಯತ್ನ ನಡೆಸುತ್ತೇವೆ. ಸಣ್ಣ ಸೋಂಕು ಹರಡಿದರೂ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೆಚ್ಚಿನ ನಿಗಾ ವಹಿಸಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.