ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಶ್ಲಾಘಿಸಿದ್ದಾರೆ.
ಇಬ್ಬರು ನಾಯಕರ ಪತ್ರಿಕಾ ಹೇಳಿಕೆಯು ಎರಡು ರಾಷ್ಟ್ರಗಳ ನಡುವಿನ ಸಂಬಂಧ ವೃದ್ದಿಗೆ ಪ್ರೋತ್ಸಾಹದಾಯಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯಿಂದ ನಾವು ಪಡೆಯ ಬಹುದಾದ ಎಲ್ಲ ನಿರೀಕ್ಷೆಗಳು ಸಹ ಈಡೇರಿವೆ ಎಂದಿರುವ ಅವರು, ಅಕ್ರಮ ವಲಸಿಗರನ್ನು ಭಾರತಕ್ಕೆ ವಾಪಸ್ ಕಳುಹಿಸುವ ವಿಧಾನವನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷರ ಭವನವಾದ ಶ್ವೇವತ ಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ರಕ್ಷಣೆ, ವ್ಯಾಪಾರ ಮತ್ತು ವಲಸೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಇದಾದ ನಂತರ ಇಬ್ಬರು ನಾಯಕರು ಸಹ ಪತ್ರಿಕಾಗೋಷ್ಠಿ ನಡೆಸಿ ಹಲವಾರು ವಿಷಯಗಳ ಕುರಿತು ಪ್ರತಿಕ್ರಿಯಿಸಿದರು. ಇನ್ನು ಪ್ರಧಾನಿ ಮೋದಿ ಭೇಟಿಗೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರಸ್ಪರ ಸುಂಕಗಳನ್ನು ಘೋಷಿಸಿದರು. ಅರ್ಥಾತ್ ಭಾರತಕ್ಕೆ ಹೆಚ್ಚು ಸುಂಕ ವಿಧಿಸುವುದಿಲ್ಲ. ಆದರೇ ಭಾರತ ಎಷ್ಟು ಸುಂಕ ವಿಧಿಸುತ್ತೊ ಅಷ್ಟೇ ಸುಂಕವನ್ನು ನಾವು ಸಹ ವಿಧಿಸುತ್ತೇವೆ ಎಂದು ಘೋಷಿಸಿದರು. ಇದು ಹೆಚ್ಚುತ್ತಿರುವ ಸುಂಕ (ಟ್ಯಾಕ್ಸ್) ಯುದ್ದದ ನಡುವೆ ಮಹತ್ವ ಪಡೆದು ಕೊಂಡಿದೆ.
ಪ್ರಮುಖ ವಿರೋಧ ಪಕ್ಷದ ನಾಯಕರಾದ ತರೂರ್ ಅವರು, ವ್ಯಾಪಾರ ಮತ್ತು ಸುಂಕಗಳ ಕುರಿತು ಮಾತುಕತೆ ನಡೆಸಿ, ಈ ವರ್ಷದ ಬೇಸಿಗೆ ಕಾಲದೊಳಗೆ ಚರ್ಚೆಗಳನ್ನು ಮುಗಿಸುವ ಎರಡೂ ಕಡೆಯವರ ನಿರ್ಧಾರವನ್ನು ಶ್ಲಾಘಿಸಿದರು.
ಇದುವರೆಗೂ ಪ್ರಧಾನಿ ಮತ್ತು ಅಧ್ಯಕ್ಷ ಟ್ರಂಪ್ ಅವರ ಪತ್ರಿಕಾ ಹೇಳಿಕೆಗಳಿಂದ ನಾವು ನೋಡಿದ್ದು ತುಂಬಾ ಉತ್ತೇಜನಕಾರಿಯಾಗಿದೆ. ಇದರೊಂದಿಗೆ ನಮಗೆಲ್ಲರಿಗೂ ಇದ್ದ ಕೆಲವು ದೊಡ್ಡ ಕಾಳಜಿಗಳನ್ನು ಪರಿಹರಿಸಲಾಗಿದೆ ಎನ್ನಬಹುದಾಗಿದೆ. ಇನ್ನು ವ್ಯಾಪಾರ ಮತ್ತು ಸುಂಕಗಳ ಪ್ರಶ್ನೆಗೆ ಸಂಬಂಧಿಸಿದಂತೆ, ಅವರು ಒಟ್ಟಿಗೆ ಕುಳಿತು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮುಕ್ತಾಯಗೊಳ್ಳುವ ಗಂಭೀರ ಮಾತುಕತೆ ನಡೆಸಲು ನಿರ್ಧರಿಸುವುದು ತುಂಬಾ ಒಳ್ಳೆಯದು ಎಂದು ತರೂರ್ ಹೇಳಿದರು.