Wednesday, November 29, 2023

Latest Posts

ಕಾಂಗ್ರೆಸ್‌ನ ತಾಕೀತು ಧಿಕ್ಕರಿಸಿ ಶಶಿ ತರೂರು ಪ್ರವಾಸ ಶುರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಲಬಾರ್ ಪ್ರವಾಸ ಕೈಗೊಳ್ಳಕೂಡದೆಂಬ ಕೇರಳ ಪ್ರದೇಶ ಕಾಂಗ್ರೆಸ್‌ನ ಅನೌಪಚಾರಿಕ ತಾಕೀತಿನ ಹೊರತೂ, ಸಂಸದ ಶಶಿ ತರೂರ್ ಭಾನುವಾರದಿಂದ ನಾಲ್ಕು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿ ಗಾಂಧಿ ಕುಟುಂಬ ನಿಷ್ಠರ ಕೆಂಗಣ್ಣಿಗೆ ತುತ್ತಾಗಿದ್ದ ತರೂರ್ ಅವರ ಹೊಸ ಪ್ರವಾಸ ಕೇರಳ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ತರೂರ್‌ಗೆ ಅಂತಹ ಯಾವುದೇ ನಿರ್ಬಂಧವನ್ನು ಪಕ್ಷ ಹೇರಿಲ್ಲ ಎಂದು ತಿಪ್ಪೆ ಸಾರುವ ಮೂಲಕ , ಹಿರಿಯ ನಾಯಕರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಶೀಲರಾಗಿದ್ದಾರೆ.

ನಾಲ್ಕು ದಿನಗಳ ಪ್ರವಾಸ ಸಂದರ್ಭ ತರೂರ್ ಐಯುಎಂಎಲ್‌ನ ಮುಖ್ಯಸ್ಥ ಪಣಕ್ಕಾಡ್ ಸಯ್ಯದ್ ಸಾದಿಕಾಲಿ ಶಿಹಾಬ್ ತಂಞಳ್ ಅವರನ್ನು ಭೇಟಿಯಾಗಲಿದ್ದು, ಈ ಮೂಲಕ ತರೂರ್ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ತನ್ನದೇ ಪ್ರಭಾವ ಬೀರಲೆತ್ನಿಸುತ್ತಿದ್ದಾರೆ ಎನ್ನಲಾಗಿದೆ.
ರಾಜನೀತಿಯನ್ನೂ ಕ್ರೀಡಾಸ್ಫೂರ್ತಿಯಿಂದ ಅಂಗೀಕರಿಸಬೇಕೆಂಬುದು ಫುಟ್‌ಬಾಲ್ ತನಗೆ ಕಲಿಸಿದ ಪಾಠ. ತಾನು ಯಾವತ್ತೂ ಗಮನ ಸೆಳೆಯುವ ತೆರ ಅಥವಾ ಕೇಂದ್ರಬಿಂದುವಿನ ಸ್ಥಾನದಲ್ಲಿದ್ದು ಆಡುವವ. ರೆಡ್‌ಕಾರ್ಡ್ ತೋರೋ ರೆಫ್ರಿ ಇನ್ನೂ ಬಂದಿಲ್ಲ ಎಂದು ತರೂರ್ ಮಾಧ್ಯಮದವರ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಪಕ್ಷೀಯರು ಕಡೆಗಣಿಸುತ್ತಿರುವಂತಿದೆಯಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!