ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಜೋಡಿ ಹೈಡನ್ ಅವರೊಂದಿಗೆ ನಿಶ್ಚಿತಾರ್ಥ ನಡೆದಿದೆ ಎಂದು ಪ್ರಧಾನಿ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು.
ಈ ಕುರಿತು ಬರೆದುಕೊಂಡಿರುವ ಅವರು, ‘ಅವಳು ಒಪ್ಪಿಕೊಂಡಳು’ ಎಂದು ಬರೆದಿದ್ದಾರೆ. ಇದಕ್ಕೆ ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿಯೊಬ್ಬರು ಅಧಿಕಾರದಲ್ಲಿರುವಾಗಲೇ ವಿವಾಹವಾಗುತ್ತಿರುವುದು ಆಸ್ಟ್ರೇಲಿಯಾದಲ್ಲಿ ಇದೇ ಮೊದಲು.
60 ವರ್ಷದ ಅಲ್ಬನೀಸ್ 2020 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ವ್ಯಾಪಾರ ಭೋಜನಕೂಟದಲ್ಲಿ ಮೊದಲ ಬಾರಿಗೆ ಹೈಡನ್ ಅವರನ್ನು ಭೇಟಿಯಾಗಿದ್ದು, ಆ ಪರಿಚಯ ಪ್ರೀತಿಗೆ ತಿರುಗಿ ಕಳೆದ ನಾಲ್ಕು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದರು. ಅಲ್ಬನೀಸ್ ಜೊತೆ 2022 ರ ಫೆಡರಲ್ ಚುನಾವಣೆಯ ಸಮಯದಲ್ಲಿ ಹೈಡೆನ್ ಪ್ರಚಾರ ಸಹ ಮಾಡಿದ್ದರು. ಆ ಚುನಾವಣೆಯಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ಅವರನ್ನು ಅಧಿಕೃತ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಲಾಯಿತು. ಹೈಡೆನ್ ಪ್ರಸ್ತುತ ನ್ಯೂ ಸೌತ್ ವೇಲ್ಸ್ ಪಬ್ಲಿಕ್ ಸರ್ವಿಸ್ ಅಸೋಸಿಯೇಷನ್‌ನಲ್ಲಿ ಅಧಿಕಾರಿಯಾಗಿದ್ದಾರೆ.
ಇದು ಪ್ರಧಾನಿ ಅಲ್ಬನೀಸ್ ಅವರ ಎರಡನೇ ವಿವಾಹವಾಗಿದೆ. ಅವರು 2000 ರಲ್ಲಿ ನ್ಯೂ ಸೌತ್ ವೇಲ್ಸ್ ಉಪ ಪ್ರೀಮಿಯರ್ ಕಾರ್ಮೆಲ್ ಟೆಟ್ನಾ ಅವರನ್ನು ವಿವಾಹವಾಗಿದ್ದರು. ಅವರಿಗೆ 23 ವರ್ಷದ ಪುತ್ರನಿದ್ದಾನೆ. 19 ವರ್ಷದ ದಾಂಪತ್ಯವನ್ನು ಕೊನೆಗೊಳಿಸಿದ ಇಬ್ಬರು 2019 ರಲ್ಲಿ ವಿಚ್ಛೇದನ ಪಡೆದಿದ್ದರು.