ಮೋದಿ ಜನಪ್ರಿಯತೆ ಕುಗ್ಗಿಸಲು ಈ ಪ್ರತಿಭಟನೆ: ಹೊಸ ವಿವಾದ ಹುಟ್ಟು ಹಾಕಿದ ರೈತ ನಾಯಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕುಗ್ಗಿಸಲು ಮಾಡಲಾಗುತ್ತಿದೆ ಎಂದು ರೈತ ನಾಯಕ ಜಗಜೀತ್ ಸಿಂಗ್ ದಲ್ಲೆವಾಲ್ ಹೇಳುವ ವಿಡಿಯೋ ವೈರಲ್ ಆಗಿದ್ದು ಹೊಸ ವಿವಾದ ಒಂದನ್ನು ಹುಟ್ಟುಹಾಕಿದೆ.

ದಲ್ಲೆವಾಲ್​ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇತ್ತ ಈ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರ ನಡುವಿನ ಕೆಸರೆರಚಾಟಕ್ಕೆ ಕಾರಣವಾಗಿದೆ.

ರಾಮಮಂದಿರದ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದನ್ನು ಕಡಿಮೆ ಮಾಡುವ ಸಮಯ ಈಗ ಬಂದಿದೆ. ಹೀಗಾಗಿ ನಾವು (ರೈತರು) ಪ್ರತಿಭಟನೆಗೆ ಇಳಿದಿದ್ದೇವೆ ಎಂದು ರೈತ ನಾಯಕ ಜಗಜೀತ್ ಸಿಂಗ್ ದಲ್ಲೆವಾಲ್ ಹೇಳುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಇದೊಂದು ರಾಜಕೀಯ ಹೇಳಿಕೆಯಾಗಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೆ ಜನ ಪ್ರಧಾನಿ ಮೋದಿಗೆ ಬೆಂಬಲ ನೀಡುವುದನ್ನು ನಿಲ್ಲಿಸುತ್ತಾರೆಯೇ. ಈ ರೀತಿಯ ಹೇಳಿಕೆ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ದಲ್ಲೆವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿ ಕಿಡಿಕಾರಿದ್ದಾರೆ.

ಜಗಜೀತ್​ ಸಿಂಗ್​ ದಲ್ಲೆವಾಲ್​ ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಸಿಧುಪುರ್) ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ಸಂಘಟನೆ ಸಕ್ರಿಯವಾಗಿ ಕೆಲಸ ಮಾಡಡುತ್ತಿದೆ. ದಲ್ಲೆವಾಲ್​ ನೀಡಿರುವ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!