ಅಧಿಕಾರದ ವ್ಯಾಮೋಹಕ್ಕೆ ಕಾಂಗ್ರೆಸ್ ಸೇರಿದ ಶೆಟ್ಟರ್: ಈಶ್ವರಪ್ಪ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಲಿಂಗಾಯತರಿಗೆ ಬಿಜೆಪಿ ಯಾವತ್ತು ಅವಮಾನ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಲಿಂಗಾಯತರಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಪಕ್ಷ ತೊರೆದ ಮೇಲೆ ಇಂತಹ ಆರೋಪ ಮಾಡುತ್ತಿದ್ದಾರೆ. ಪಕ್ಷದಲ್ಲಿ ಅಧಿಕಾರ ಅನುಭವಿಸುವಾಗ ಏಕೆ ಇಂತಹ ಮಾತನ್ನು ಆಡಲಿಲ್ಲ. ಈಗ ಕಾಂಗ್ರೆಸ್ ಸೇರಿದ ಮೇಲೆ ಜಾತಿ, ಧರ್ಮ, ಸಮುದಾಯ ಅವರಿಗೆ ನೆನಪಾಗಿದೆ ಅನಿಸುತ್ತೆ ಎಂದು ಹರಿಹಾಯ್ದರು.

ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ನೀಡಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಬಿಜೆಪಿ ಚೆನ್ನಾಗಿ ನಡೆಸಿಕೊಂಡಿಲ್ಲ ಎನ್ನುವುದಕ್ಕೆ ಅವರು ಮನೆ ಅಳಿಯನಾ? ಇಲ್ಲಿಯ ವರೆಗೆ ಪಕ್ಷದಲ್ಲಿರುವ ಯಾವ ವ್ಯಕ್ತಿ ಇಂತಹ ಹೇಳಿಕೆ ನೀಡಿಲ್ಲ. ಪಕ್ಷ ಇವರಿಗೆ ಎಲ್ಲ ಸ್ಥಾನ ಮಾನ ನೀಡಿತ್ತು. ಈಗ ಕಾಂಗ್ರೆಸ್ ಹೋಗಿದ್ದಾರೆ. ಸಿದ್ದರಾಮಯ್ಯ ಗುಂಪೋ ಇಲ್ಲ, ಡಿ.ಕೆ.ಶಿ ಗುಂಪೋ ಇಲ್ಲ ಅಥವಾ ಸ್ವಂತ ಗುಂಪು ಕಟ್ಟುತ್ತಾರೆ ನೋಡಬೇಕು ಎಂದರು.

ಕೇಂದ್ರ ವರಿಷ್ಠರು ಚುನಾವಣಾ ನಿವೃತ್ತಿ ತೆಗೆದುಕೊಳ್ಳಿ ಎಂದು ಹೇಳಿತ್ತು. ಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕಾ ಸಚಿವ ಸ್ಥಾನ ಎಲ್ಲವನ್ನೂ ಅನುಭವಿಸಿದ್ದಾರೆ. ಎಲ್ಲ ಅಧಿಕಾರವಹಿಸಿ ಎಂದಾಗ ಸಿಹಿಯಂತೆ ಸ್ವೀಕರಿಸಿದ ಇವರು ಚುನಾವಣಾ ನಿವೃತ್ತಿ ತೆಗೆದುಕೊಳ್ಳಿ ಎಂಬ ವರಿಷ್ಠರ ಮಾತು ಯಾಕೆ ಕಹಿಯಾಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಒಂದು ಕೋಟಿ ಕಾರ್ಯಕರ್ತರಿದ್ದಾರೆ. ಪಕ್ಷದಲ್ಲಿ ದುಡಿದವರಿಗೆ ಉತ್ತಮ ಗೌರವ ನೀಡಲಾಗುತ. ಪಕ್ಷ ಹೆಚ್ಚು ಬೆಳೆದಂತೆ ಎಲ್ಲರಿಗೂ ಅವಕಾಶ ನೀಡುವ ಅವಶ್ಯಕತೆ ಇರುತ್ತದೆ. ಇದರಿಂದ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದಾರೆ. ಇದನ್ನು ಅರಿಯದೇ ಈಗ ಮುಸ್ಲಿಂ ಟೋಪಿ ಹಾಕಿಕೊಳ್ಳು ಹೋಗಿದ್ದಾರೆ. ಬಿಜೆಪಿ ವ್ಯಕ್ತಿ ಮುಖ್ಯ ಎಂದು ಎನ್ನಿಸಿದ್ದು, ಬಹುಶಃ ಶೆಟ್ಟರಿಗೆ ಮಾತ್ರ ಅನಿಸಿರಬೇಕು. ಈ ಮಾತು ಇಲ್ಲಿಯವರೆಗೆ ಬೇರೆ ಯಾರು ಹೇಳಿಲ್ಲ ಎಂದರು.

ಹಿಂದೆ ವಿಧಾನ ಸೌಧದಲ್ಲಿ ಹಿಂದೂಗಳ ಹತ್ಯೆ, ಗೋಹತ್ಯೆ ಕಾಯ್ದೆ, ಪಿಎಫ್‌ಐ ಬ್ಯಾನ್ ಮಾಡುವ ವಿಚಾರವಾಗಿ ಧ್ವನಿ ಎತ್ತಿದ್ದರು. ಈಗ ಕಾಂಗ್ರೆಸ್ ಸೇರಿದ್ದಾರೆ ಈ ಬಗ್ಗೆ ಮಾತನಾಡುತ್ತಾರಾ? ಬಿಜೆಪಿ ತಂದಿರುವ ಎಲ್ಲ ಕಾಯ್ದೆ ಹಾಗೂ ನೀಡಿದ ಮೀಸಲಾತಿ ತೆಗೆಯುತ್ತೇವೆ ಎಂದಿದ್ದಾರೆ ಇದಕ್ಕೆ ಶೆಟ್ಟರ ಒಪ್ಪುತ್ತಾರಾ?. ಅಧಿಕಾರದ ವ್ಯಾಮೋಹಕ್ಕೆ ಕಾಂಗ್ರೆಸ್ ಸೇರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!