ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಂತಿನಾಡಾಗಿದ್ದ ಶಿವಮೊಗ್ಗ ಇದೀಗ ಬೂದಿಮುಚ್ಚಿದ ಕೆಂಡದಂತಾಗಿದೆ. ರಾಗಿಗುಡ್ಡದಲ್ಲಿ ನಡೆದ ಗಲಭೆಯಿಂದಾಗಿ ಇಡೀ ಜಿಲ್ಲೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.
ಇದೊಂದು ಸಣ್ಣ ಗಲಭೆ ಅಷ್ಟೆ, ಈ ಬಗ್ಗೆ ಮೊದಲೇ ಸೂಚನೆಯಿತ್ತು ಹಾಗಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ಟ್ ಏರ್ಪಡಿಸಿದ್ದೆವು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದರು.
ಈ ಹೇಳಿಕೆ ಶಿವಮೊಗ್ಗ ಜನತೆಗೆ ಸಮಾಧಾನ ತಂದಿರಲಿಲ್ಲ. ಆದರೆ ಇದೀಗ ಮತ್ತೆ ಗೃಹ ಸಚಿವರು ಅದೇ ಹೇಳಿಕೆಯನ್ನು ಹೇಳಿದ್ದಾರೆ. ಶಿವಮೊಗ್ಗಕ್ಕೆ ಇದೆಲ್ಲಾ ಏನ್ ಹೊಸಾದಾ? ದೊಡ್ಡ ಪ್ರಮಾದ ತಪ್ಪಿದೆ. ಎರಡೂ ಗುಂಪಿನ ಜನರನ್ನು ಬಂಧಿಸಿದ್ದಾರೆ. ಈ ಘಟನೆಗೆ ಕಾರಣ ಇದ್ದೇ ಇದೆ, ಆದರೆ ಅದನ್ನೆಲ್ಲ ಬಯಲು ಮಾಡೋಕೆ ಆಗೋದಿಲ್ಲ. ಕಾನೂನು ರೀತಿಯಲ್ಲಿ ಏನು ಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.
ಇಷ್ಟು ದೊಡ್ಡ ಮಟ್ಟದಲ್ಲಿ ಗಲಭೆಯಾದರೂ ಗೃಹ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ ಎಂದರೆ ಗಲಭೆ ಹಿಂದೆ ಸರ್ಕಾರದ ಕೈವಾಡ ಇರಬಹುದು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.