ಶಿರೂರಿನ ಗುಡ್ಡ ಕುಸಿತ: ಹತ್ತು ಮಂದಿ ಕಣ್ಮರೆ, ಆರು ಶವಪತ್ತೆ

ಹೊಸದಿಗಂತ ವರದಿ, ಕಾರವಾರ :

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿರುವ ಮಾಹಿತಿ ಸಿಕ್ಕಿದ್ದು, ಈ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದೇ ಕುಟುಂಬದ ನಾಲ್ಕು ಮತ್ತು ಅದೇ ಕುಟುಂಬದ ಸಂಬಂಧಿಯಾದ ಜಗನ್ನಾಥ, ಉಳುವರೆ ಗ್ರಾಮದ ಸಣ್ಣಿ ಗೌಡ, ಮೂರು ಟ್ಯಾಂಕರ್ ಹಾಗೂ ಒಂದು ಲಾರಿಯ ಚಾಲಕರು ಕಣ್ಮರೆಯಾಗಿರುವುದಾಗಿ ಅವರ ಕುಟುಂಬಗಳು ಮಾಹಿತಿ ನೀಡಿವೆ. ಈ ಪೈಕಿ ಶಿರೂರಿನ ಒಂದೇ ಕುಟುಂಬದ ನಾಲ್ವರು, ತಮಿಳುನಾಡಿನ ನಾಮಕ್ಕಲ್’ನ ಚಿಣ್ಣನನ್ ಎಂಬ ಟ್ಯಾಂಕರ್ ಚಾಲಕನ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಸಿಕ್ಕಿದ್ದು, ಅದರ ಗುರುತು ಪತ್ತೆ ಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಿಂದ ಹುಬ್ಬಳ್ಳಿಗೆ ಅಡುಗೆ ಅನಿಲ ಪೂರೈಸಲು ಸಾಗುತ್ತಿದ್ದ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಬಿದ್ದಿದ್ದು, ಸಗಡಗೇರಿ ಬಳಿ ನದಿಯಲ್ಲಿರುವ ಈ ಗ್ಯಾಸ್ ಟ್ಯಾಂಕರ್ ನಲ್ಲಿ ತುಂಬಿರುವ ಅನಿಲ ಖಾಲಿ ಮಾಡಲು ಎಚ್.ಪಿ.ಸಿ.ಎಲ್ ಕಂಪನಿಯ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಸುರಕ್ಷತಾ ಕ್ರಮವಾಗಿ ಸುತ್ತಲಿನ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗಿದೆ ಎಂದರು.

ಜೊಯಿಡಾದ ರಾಮನಗರದಿಂದ ಕೇರಳಕ್ಕೆ ನಾಟಾ ಸಾಗಿಸುತ್ತಿದ್ದ ಲಾರಿಯ ಜಿಪಿಎಸ್ ಲೊಕೇಶನ್ ಮಣ್ಣಿನ ರಾಶಿಯ ಬಳಿ ಪತ್ತೆಯಾಗಿದೆ. ಹೀಗಾಗಿ ಈ ಲಾರಿ ಮಣ್ಣಿನಡಿ ಹುದುಗಿರುವ ಶಂಕೆ ಇದೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!