ಹೊಸದಿಗಂತ ವರದಿ, ಅಂಕೋಲಾ :
ಶಿರೂರು ಗುಡ್ಡ ಕುಸಿತದ ಹಿನ್ನೆಳೆಯಲ್ಲಿ ಕೇರಳದ ಅರ್ಜುನ , ಕುಮಟಾದ ಜಗನ್ನಾಥ ಶೋಧಕ್ಕೆ ಭೂಸೇನೆ ಮತ್ತು ಎನ್.ಡಿ.ಆರ್ ಎಫ್ ತಂಡ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿರುವುದರ ಮಧ್ಯೆ ಒಂದು ಟ್ರಕ್ ನೀರಿನಲ್ಲಿ ಮುಳುಗಿದೆ ಎಂಬುದು ಖಚಿತವಾಗಿದೆ .
ಇದರ ಇರುವಿಕೆ ದೃಢಪಟ್ಟಿರುವುದಾಗಿ ಕಂದಾಯ ಸಚಿವ ಕೃಷ್ಣ ಭೈರೆಗೌಡ ಹೇಳಿಕೆ ನೀಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ನೌಕಾಪಡೆಯ ಡೀಪ್ ಡೈವರ್‌ಗಳು ಶೀಘ್ರದಲ್ಲೇ ಲಂಗರು ಹಾಕಲು ಪ್ರಯತ್ನಿಸುತ್ತಾರೆ. ಟ್ರಕ್ ಅನ್ನು ನದಿಯಿಂದ ಮೇಲೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್‌ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ. ನೀರಿನಲ್ಲಿ ನಾಪತ್ತೆಯಾದ ಮೃತ ದೇಹಗಳಿಗಾಗಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸುತ್ತಿದೆ ಎಂದು ಸಚಿವ ಕೃಷ್ಣ ಭೈರೆಗೌಡ ತಮ್ಮ x ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಮಧ್ಯೆ ಕಾರ್ಯಾಚರಣೆ ಸ್ಥಳಕ್ಕೆ ಡಿಸಿ ಎಸ್ಪಿ ಧಾವಿಸಿದ್ದಾರೆ.
ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ, ಮುಗುಳುತಜ್ಞರ ಸಹಾಯದಿಂದ ಶೋಧ ಕಾರ್ಯ ಸಾಗಿದೆ. ನದಿಯಲ್ಲಿ ಭಾರಿ ಪ್ರಮಾಣದ ಮಣ್ಣಿದ್ದು ಕಾರ್ಯಾಚರಣೆಗೆ ಅಡಚಣೆ ಎದುರಾಗುತ್ತಿದೆ.