ಹೊಸದಿಗಂತ ವರದಿ, ಬನವಾಸಿ:
ಶಿವರಾತ್ರಿಯಂದು ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಭಕ್ತಾಧಿಗಳು ಇಲ್ಲಿನ ಇತಿಹಾಸ ಪುರಾತನ ಶ್ರೀ ಮಧುಕೇಶ್ವರ ಹಾಗೂ ಸಮೀಪದ ಗುಡ್ನಾಪೂರದ ಶ್ರೀ ಬಂಗಾರೇಶ್ವರ ಸಾನಿಧ್ಯಕ್ಕೆ ಆಗಮಿಸಿ ಭಕ್ತಿ ಪರವಶದಲ್ಲಿ ಮಿಂದು ಭಗವಂತನ ಆರಾಧನೆ ಮಾಡಿದರು.
ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದರು. ಸರದಿ ಸಾಲಿನಲ್ಲಿ ನಿಂತು ಸಾಂಪ್ರದಾಯಿಕವಾಗಿ ರೂಢಿಯಲ್ಲಿ ಬಂದಂತೆ ಗರ್ಭಗುಡಿ ಪ್ರವೇಶಿಸಿ ಕ್ಷೇತ್ರದಲ್ಲಿನ ಶಿವಲಿಂಗಕ್ಕೆ ಬಿಲ್ವಾ ಪತ್ರೆ, ಹೂ ಅರ್ಪಿಸಿ, ಜಲ ಹಾಲು,ಎಳನೀರು, ತುಪ್ಪಗಳಿಂದ ಅಭಿಷೇಕ ಮಾಡಿ ಪುನೀತರಾದರು. ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ವಿವಿಧ ಸಂಘ ಸಂಸ್ಥೆಗಳು ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತಂಪುಪಾನೀಯ, ಹಣ್ಣು, ಅಲ್ಪೋಪಹಾರ ಸೇವೆಯನ್ನು ನೀಡಿದರು.