ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೂತನ ಅಧಿಕೃತ ನಿವಾಸ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಕಷ್ಟ ಎದುರಾಗಿದ್ದು, ಕೇಂದ್ರ ಸರ್ಕಾರ ಸಿಎಂ ಮನೆ ನವೀಕರಣ ಅಕ್ರಮ ತನಿಖೆ ಹೊಣೆಯನ್ನು ಸಿಬಿಐಗೆ ನೀಡಿದೆ. ಕೇಂದ್ರದ ಈ ನಡೆಯಿಂದ ಅರವಿಂದ್ ಕೇಜ್ರಿವಾಲ್‌ಗೆ ಇದೀಗ ಸಂಕಷ್ಟ ಹಚ್ಚಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಅನ್ನೋ ಆರೋಪ ಭಾರಿ ಸಂಚಲನ ಸೃಷ್ಟಿಸಿತ್ತು.
ಕೇಂದ್ರ ಗೃಹ ಸಚಿವಾಲಯ ಆದೇಶದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ದೆಹಲಿ ಸರ್ಕಾರದ ವಿವಿಧ ಇಲಾಖೆಗಳ ವರದಿ ಕೇಳಿದ್ದಾರೆ. ಪ್ರಮುಖವಾಗಿ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಬಳಿ ಸಿಎಂ ನಿವಾಸ ನವೀಕರಣದ ಕುರಿತು ಲಭ್ಯವಿರುವ ಎಲ್ಲಾ ದಾಖಲೆಗಳನ್ನು, ಕಡತಗಳನ್ನು ಅಕ್ಟೋಬರ್ 3ರೊಳಗೆ ಸಿಬಿಐಗೆ ಸಲ್ಲಿಸಲು ಸೂಚಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕೇಂದ್ರಕ್ಕೆ ಬರೆದಿದ್ದ 5 ಪುಟಗಳ ಪತ್ರದ ಆಧಾರದಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.
ಆರೋಪ ಏನು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ನವೀಕರಿಸಲು 45 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಈ ಗಂಭೀರ ಆರೋಪನ್ನು ಮಾಡಿತ್ತು.