October 9, 2026
Friday, October 9, 2026
spot_img

ಗಣೇಶ ಹಬ್ಬದ ಬೆನ್ನಲ್ಲೇ ಗ್ರಾಹಕರಿಗೆ ಶಾಕ್: ಕೆ.ಆರ್. ಮಾರ್ಕೆಟ್‌ನಲ್ಲಿ ದುಪ್ಪಟ್ಟಾಯ್ತು ಹಣ್ಣುಗಳ ಬೆಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಧಾನಿ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಹಬ್ಬದ ಕಳೆ ಮನೆಮಾಡಿದ್ದು, ನಗರದ ಕೆ.ಆರ್. ಮಾರ್ಕೆಟ್‌ನಲ್ಲಿ ಹೂವು-ಹಣ್ಣುಗಳ ಖರೀದಿಗೆ ಜನಸಾಗರವೇ ಹರಿದುಬರುತ್ತಿದೆ. ಹಬ್ಬದ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು, ಹಣ್ಣುಗಳ ಬೆಲೆಯನ್ನು ಗಗನಕ್ಕೇರಿಸಿದ್ದಾರೆ. ಇದರಿಂದಾಗಿ ಹಬ್ಬದ ಬಜೆಟ್ ತಲೆಕೆಳಗಾಗಿದ್ದು, ಗ್ರಾಹಕರು ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಮಾರುಕಟ್ಟೆಯಲ್ಲಿ ಸದ್ಯ ಸೇಬು ಮತ್ತು ದಾಳಿಂಬೆ ಹಣ್ಣುಗಳ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ಹಿಂದೆ 110 ರೂಪಾಯಿಗೆ ಸಿಗುತ್ತಿದ್ದ ಒಂದು ಕೆಜಿ ಸೇಬು ಬೆಲೆ ಈಗ ಬರೋಬ್ಬರಿ 270 ರೂಪಾಯಿಗೆ ತಲುಪಿದ್ದು, ಬರೋಬ್ಬರಿ 160 ರೂಪಾಯಿ ಏರಿಕೆಯಾಗಿದೆ. ಇನ್ನುಳಿದಂತೆ ಎಲಕ್ಕಿ ಬಾಳೆಹಣ್ಣು ಹಾಗೂ ಸಾಮಾನ್ಯ ಬಾಳೆಹಣ್ಣಿನ ಬೆಲೆಗಳು ದುಪ್ಪಟ್ಟಾಗಿದ್ದು, ಹಬ್ಬದ ಆಚರಣೆಗೆ ಬರುವ ಜನರಿಗೆ ಬಿಸಿ ಮುಟ್ಟಿಸಿದೆ.

ಬೆಲೆ ಎಷ್ಟೇ ಹೆಚ್ಚಾದರೂ ಹಬ್ಬದ ಆಚರಣೆಗೆ ಯಾವುದೇ ಕೊರತೆ ಮಾಡಬಾರದು ಎಂದು ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳ ಆಯೋಜಕರು ಮಾರ್ಕೆಟ್‌ನಲ್ಲಿ ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ, ಈ ಬಾರಿಯ ಗಣೇಶ ಚತುರ್ಥಿಗೆ ವಿನಾಯಕನ ಆಶೀರ್ವಾದದ ಜತೆಗೆ ಹಣ್ಣುಗಳ ಬೆಲೆಯೇರಿಕೆಯ ಬಿಸಿಯೂ ಜನರಿಗೆ ತಟ್ಟಿದೆ.

ಹಣ್ಣುಗಳ ಇಂದಿನ ದರ

ಸೇಬು-270 ರೂ.

ದಾಳಿಂಬೆ -260 ರೂ.

ಕಿತ್ತಳೆ- 180 ರೂ.

ಏಲಕ್ಕಿ ಬಾಳೆಹಣ್ಣು- 100 ರೂ.

ಸಾಮಾನ್ಯ ಬಾಳೆಹಣ್ಣು-100 ರೂ.

ದ್ರಾಕ್ಷಿ- 170 ರೂ.

ಅನಾನಸ್ -150 ರೂ.

ಮೂಸಂಬಿ-150 ರೂ.

Must Read