October 5, 2026
Monday, October 5, 2026
spot_img

ಹೋಟೆಲ್, ಜ್ಯೂಸ್ ಅಂಗಡಿಗಳಿಗೆ ಶಾಕ್: ಆಹಾರ ಸುರಕ್ಷತಾ ಅಧಿಕಾರಿಗಳಿಂದ ಫುಡ್ ಸೇಫ್ಟಿ ಚೆಕ್

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ನಗರದ ವಿವಿಧ ಹೋಟೆಲ್ ಹಾಗೂ ಜ್ಯೂಸ್ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳ ತಂಡವು ದಿಢೀರ್ ದಾಳಿ ನಡೆಸಿ, ಆಹಾರದ ಗುಣಮಟ್ಟ ಹಾಗೂ ನೈರ್ಮಲ್ಯ ಪರಿಶೀಲಿಸಿತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು.

ಚಿತ್ರದುರ್ಗ ನಗರದ ವೆಂಕಟೇಶ್ವರ ವೆಜ್ ಮತ್ತು ನಾನ್ ವೆಜ್ ಹೋಟೆಲ್, ರೆಡ್ಡಿ ನಾಟಿ ಸ್ಟೈಲ್ ನಾನ್ ವೆಜ್ ಮಿಲ್ಟ್ರಿ ಹೋಟೆಲ್ ಹಾಗೂ ಇಮ್ರಾನ್ ಉಲ್ಲಾ ಫ್ರೈಟ್ ಜ್ಯೂಸ್ ಅಂಗಡಿಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಅಡುಗೆ ಮನೆಯ ಸ್ವಚ್ಛತೆ, ಸಿದ್ಧಪಡಿಸಿದ ಆಹಾರದ ಶುಚಿತ್ವ ಹಾಗೂ ಸುರಕ್ಷತೆ ಪರಿಶೀಲಿಸಿದರು.

ಆಹಾರ ತಯಾರಿಕೆಗೆ ಬಳಸಲಾಗುವ ಅಡುಗೆ ಎಣ್ಣೆಯ ತಪಾಸಣೆ ನಡೆಸಿದ್ದಲ್ಲದೆ, ಮಸಾಲೆ ಪದಾರ್ಥಗಳ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಪ್ರತಿಯೊಂದು ಮಳಿಗೆಯ ಬಳಿ ವ್ಯಾಪಾರ ಪರವಾನಗಿ ಪತ್ರವಿದೆಯೇ ಎಂಬುದನ್ನೂ ಪರಿಶೀಲಿಸಲಾಯಿತು. ನಿಯಮ ಪಾಲಿಸದ ಹಾಗೂ ನೈರ್ಮಲ್ಯ ಕಾಪಾಡದ ಮಳಿಗೆದಾರರಿಗೆ ಸೂಚನೆಗಳನ್ನು ನೀಡಲಾಯಿತು.

ಈ ದಿಢೀರ್ ಕಾರ್ಯಾಚರಣೆಯ ವೇಳೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಡಾ. ಬಿ.ವಿ.ಗಿರೀಶ್, ಚಳ್ಳಕೆರೆ ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಡಾ. ಎನ್.ಕಾಶಿ ಹಾಗೂ ಹಿರಿಯೂರು ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿ ಎಂ.ಜಿ. ನಾಗೇಶ್ ಹಾಜರಿದ್ದರು.

Must Read