ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ತಿಂಗಳ ಮೂರು ದಿನದ ಗಂಡು ಮಗುವನ್ನು ಅಪರಿಚಿತ ದುಷ್ಕರ್ಮಿಗಳು ಮನೆಯ ಓವರ್‌ಹೆಡ್ ನೀರಿನ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಗ್ಗಲೂರಿನಲ್ಲಿ ಘಟನೆ ನಡೆದಿದೆ.
ಹರ್ಷಿತಾ ಮತ್ತು ಮನು ದಂಪತಿಯ ಒಂದೂವರೆ ತಿಂಗಳಿನ ಕಂದಮ್ಮ ಅಮಾನವೀಯವಾಗಿ ಸಾವನ್ನಪ್ಪಿದ ಕಂದಮ್ಮ.
ಒಂದೂವರೆ ವರ್ಷದ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಈ ದಂಪತಿಗೆ ಏಳು ತಿಂಗಳಿಗೆ ಅವಧಿ ಪೂರ್ವ ಮಗು ಜನನವಾಗಿತ್ತು. ಸಿಜೇರಿಯನ್ ಮೂಲಕ ಮಗು ಜನನ ಆಗಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಒಂದು ತಿಂಗಳು ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣಮುಖವಾದ ಹಿನ್ನೆಲೆ ವಾರದ ಹಿಂದೆ ಮನೆಗೆ ಕರೆತರಲಾಗಿತ್ತು. ಮಹಾಲಕ್ಷ್ಮಿ ಮನೆಗೆ ಬಂದಿದ್ದರಿಂದ ಎರಡು ಕುಟುಂಬದವರು ಖುಷಿಯಾಗಿದ್ದರು. ಆದ್ರೆ, ನಿನ್ನೆ(ನವೆಂಬರ್ 04) ತೊಟ್ಟಿಲಲ್ಲಿದ್ದ ಮಗು ನಿಗೂಢವಾಗಿ ನಾಪತ್ತೆಯಾಗಿ ಮನೆ ಮೇಲಿನ ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಹತ್ತಿರದ ಸಂಬಂಧಿಕರಿಂದಲೇ ಕೊಲೆ ಶಂಕೆ ವ್ಯಕ್ತವಾಗಿದೆ.
ಇನ್ನೂ ಅಂತರ್ಜಾತಿ ವಿವಾಹ ಆದ್ದರಿಂದ ತಾಯಿ ಮತ್ತು ಮಗುವಿಗೆ ತವರು ಮನೆಯಲ್ಲೇ ಹಾರೈಕೆ ಮಾಡಲಾಗುತ್ತಿತ್ತು. ಪತಿ ಮನು ಮಾತ್ರ ಆಗಾಗ ಬಂದು ಹೋಗುತ್ತಿದ್ದ. ನಿನ್ನೆ ಸಹ ಮನೆಗೆ ಬಂದಿದ್ದ ಮನು ಮಗಳ ಜೊತೆ ಕೆಲಹೊತ್ತು ಆಟವಾಡಿ ಕೆಲಸಕ್ಕೆ ತೆರಳಿದ್ದಾನೆ. ಮಧ್ಯಾಹ್ನ 12:30 ರ ಸುಮಾರಿಗೆ ಕರೆ ಮಾಡಿದ ಪತ್ನಿ ಹರ್ಷಿತಾ ತಾನು ಶೌಚಾಲಯಕ್ಕೆ ಹೋಗಿ ಬರುವಷ್ಟರಲ್ಲಿ ತೊಟ್ಟಿಲಲ್ಲಿದ್ದ ಮಗು ಕಾಣುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ. ಬಳಿಕ ಎರಡು ಕಡೆ ಕುಟುಂಬದವರು ಎಲ್ಲಾ ಕಡೆ ಹುಡುಕಾಡಿದರು ಮಗುವಿನ ಸುಳಿವಿಲ್ಲ. ಕೊನೆಗೆ ಆತಂಕಗೊಂಡು ಸೂರ್ಯನಗರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರ ಪರಿಶೀಲನೆ ವೇಳೆ ಮನೆ ಮೇಲಿನ ನೀರಿನ ಸಿಂಟೆಕ್ಸ್ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ.
ತೊಟ್ಟಿಲಲ್ಲಿ ಬೆಚ್ಚಗೆ ಮಲಗಿದ್ದ ಮಗು ಸಿಂಟೆಕ್ಸ್ ಟ್ಯಾಂಕ್ ನಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈಗಾಗಲೇ ಬೆರಳಚ್ಚು, ಶ್ವಾನದಳ, ಸೋಕೋ ಟೀಮ್ ನಿಂದ ಸಾಕ್ಷ್ಯ ಕಲೆ ಹಾಕಿದೆ. ಮರಣೋತ್ತರ ಪರೀಕ್ಷೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಂದ ಬಳಿಕ ಮಗುವಿನ ಸಾವಿನ ರಹಸ್ಯ ಜೊತೆ ಆರೋಪಿಗಳ ಸುಳಿವು ಸಿಗಲಿದೆ.