ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಹಠಾತ್ ಅಸ್ವಸ್ಥರಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಠಾತ್ ಉಸಿರಾಟದ ತೊಂದರೆಯಿಂದ ಮೋಹನ್ ಲಾಲ್ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೋಹನ್ ಲಾಲ್ ಚಿಕಿತ್ಸೆ ಕುರಿತು ಆಸ್ಪತ್ರೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
64 ವರ್ಷದ ಮೋಹನ್ ಲಾಲ್ ಅವರು ತೀವ್ರ ಜ್ವರ, ತೋಳು ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಗುಜರಾತ್‌ಗೆ ಭೇಟಿ ನೀಡಿದ್ದ ಮೋಹನ್‌ಲಾಲ್ ಚಿತ್ರೀಕರಣ ಮುಗಿಸಿ ಕೊಚ್ಚಿಗೆ ಮರಳಿದ್ದರು. ಹಿಂದಿರುಗಿದ ಸ್ವಲ್ಪ ಸಮಯದ ನಂತರ, ಜ್ವರ ಕಾಣಿಸಿಕೊಂಡಿತು. ಆದರೆ ಅವರ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಉಸಿರಾಟದ ತೊಂದರೆಯಿಂದಾಗಿ ಇಂದು ಬೆಳಗ್ಗೆ ಕೊಚ್ಚಿಯ ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯ ಆಡಳಿತ ಮಂಡಳಿಯು ಮೋಹನ್‌ಲಾಲ್ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “65 ವರ್ಷದ ಮೋಹನ್‌ಲಾಲ್ ಅವರನ್ನು ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೋಹನ್ ಲಾಲ್ ಅವರಿಗೆ ತೀವ್ರ ಜ್ವರ, ಸ್ನಾಯು ನೋವು, ಉಸಿರಾಟದ ತೊಂದರೆ ಇದೆ ಎಂದು ತಿಳಿದುಬಂದಿದೆ. ಮೋಹನ್ ಲಾಲ್ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಶಂಕೆ ವ್ಯಕ್ತವಾಗಿದೆ. ಅವರಿಗೆ ಐದು ದಿನಗಳ ಕಾಲ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲಾಗುತ್ತದೆ. ಇದಲ್ಲದೆ, ಐದು ದಿನಗಳವರೆಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.