ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇದೀಗ ಮಂಕಿಪಾಕ್ಸ್ ಪ್ರಕರಣ ಆತಂಕ ಹೆಚ್ಚಿಸಿದೆ. ಈಗಾಗಲೇ ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇದೀಗ ಎರಡನೇ ಪ್ರಕರಣ ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ
ಮಂಕಿಪಾಕ್ಸ್ ರೋಗಲಕ್ಷಣ ಹೊಂದಿದ್ದ ಕೇರಳದ ಯುವಕ ಕಣ್ಣೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಕಿಪಾಕ್ಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಯುವಕನ ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವಿರೋಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಇತ್ತ ಕಣ್ಣೂರು ಸೇರಿದಂತೆ 5ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಯುವಕನ ಆರೋಗ್ಯದ ಮೇಲೆ ಸಂಪೂರ್ಣ ನಿಗಾವಹಿಸಲಾಗಿದೆ. ಇತರರಿಂದ ಹರಡದಂತೆ ಎಚ್ಚರ ವಹಿಸಲಾಗಿದೆ.
ಮಧ್ಯಪ್ರಾಶ್ಚ್ಯದೇಶದಿಂದ(Middle east) ಕಣ್ಣೂರಿಗೆ ಆಗಮಿಸಿದ ಈ ಯುವಕನಲ್ಲಿ ಕಳೆದ ಒಂದು ವಾರದಿಂದ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಮಂಕಿಪಾಕ್ಸ್ ರೋಗಲಕ್ಷಣಗಳಂತೆ ಕಜ್ಜಿ ಅಥವಾ ಗುಳ್ಳೆಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ದೇಹ ತುರಿಕೆ ಹೆಚ್ಚಾಗಿದೆ. ಹೀಗಾಗಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಆಸ್ಪತ್ರೆ ದಾಖಲಾಗಿದ್ದಾನೆ. ವಿದೇಶದಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕ, ದಾರಿ ಮಾರ್ಗದ ಮೂಲಕ ಕಣ್ಣೂರಿಗೆ ತೆರಳಿದ್ದಾನೆ. ಈತನ ಆಗಮಿಸಿದ ವಿಮಾನದಲ್ಲಿನ ಇತರ ಪ್ರಯಾಣಿಕರ ಮಾಹಿತಿಯನ್ನು ಕಣ್ಣೂರು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಇದರಲ್ಲಿ ಕೇರಳ ರಾಜ್ಯದ ಪ್ರಯಾಣಿಕರ ಮಾಹಿತಿಯನ್ನು ಪಡೆದು ಅವರನ್ನು ಐಸೋಲೇಶನ್‌ಗೆ ಸೂಚಿಸಲು ಮುಂದಾಗಿದೆ.
ಕೇರಳದಲ್ಲಿ ಈಗಾಗಲೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಕಾರಣ 5 ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ಪ್ರಯಾಣಿಕರ ತಪಾಸಣೆ ನಡೆಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೀಗ ಕೇರಳದಲ್ಲಿ ಕೋವಿಡ್ ಜೊತೆಗೆ ಮಂಕಿಪಾಕ್ಸ್ ಪ್ರಕರಣ ಭೀತಿ ಹೆಚ್ಚಾಗಿದೆ. ಮಂಕಿಪಾಕ್ಸ್ ಪ್ರಕರಣ ಮಕ್ಕಳಿಗೆ ಮಾರಕವಾಗಬಹುದು ಅನ್ನೋ ಏಮ್ಸ್ ತಜ್ಞರ ಎಚ್ಚರಿಕೆ ಬೆನ್ನಲ್ಲೇ ಇದೀಗ ಎರಡನೇ ಪ್ರಕರಣದ ಶಂಕೆ ಕಾಡುತ್ತಿದೆ.
ಕೇರಳದ ಕೊಲ್ಲಂ ಜಿಲ್ಲೆಯ 35 ವರ್ಷದ ವ್ಯಕ್ತಿಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕಕರಣ ಪತ್ತೆಯಾಗಿತ್ತು. ಮಂಕಿಪಾಕ್ಸ್ ದೃಢಪಟ್ಟ ವ್ಯಕ್ತಿ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.