SHOCKING | ಮತ್ತೆ ಬಿಜೆಪಿಗೆ ಸೇರ್ಪಡೆ ಆಗ್ತಾರಾ ಜನಾರ್ದನ ರೆಡ್ಡಿ?

ಹೊಸದಿಂಗತ ಡಿಜಿಟಲ್ ಡೆಸ್ಕ್:

ಮಾಜಿ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿಗೆ ಸೇರುತ್ತಾರಾ ಅನ್ನುವ ಅನುಮಾನ ಮೂಡಿದೆ. ಅವರ ಇತ್ತೀಚಿನ ಕೆಲವು ನಡೆಗಳು ಹಾಗೂ ಬಿಜೆಪಿ ಮುಖಂಡರೊಬ್ಬರನ್ನು ಭೇಟಿಯಾಗಿ ಚರ್ಚಿಸಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.

ಸದ್ಯ ಗಾಲಿ ಜನಾರ್ದನ ರೆಡ್ಡಿಯವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ತಾವೇ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖ್ಯಸ್ಥರಾಗಿದ್ದಾರೆ. ನಿನ್ನೆ ಸಂಜೆ ದೇವದುರ್ಗದ ಮಾಜಿ ಶಾಸಕ ಶಿವನಗೌಡ ನಾಯಕ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೆಡ್ಡಿ ಗೌಪ್ಯವಾಗಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ಅವರು ಬಿಜೆಪಿಗೆ ಮತ್ತೆ ಸೇರಲಿದ್ದಾರೆ ಎಂಬ ಅನುಮಾನ ಮೂಡಿದೆ.

ಇತ್ತೀಚೆಗೆ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮದ ಮಂತ್ರಾಕ್ಷತೆಯನ್ನು ಸಹ ಮನೆ ಮನೆಗೆ ತೆರಳಿ ಹಂಚುತ್ತಿದ್ದಾರೆ. ಬಿಜೆಪಿಗೆ ಸೇರುವ ಅನುಮಾನ ಹೆಚ್ಚಾಗಿರುವ ಸಮಯದಲ್ಲೇ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಹಂಚುತ್ತಿರುವುದು ಬಿಜೆಪಿ ಸೇರುವ ವದಂತಿಗೆ ಪುಷ್ಟಿ ನೀಡಿದೆ.

ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಘಟನೆಯಲ್ಲಿ ಜನಾರ್ದನ ರೆಡ್ಡಿ ಅವರ ಪಾತ್ರ ಪ್ರಮುಖವಾಗಿತ್ತು. ಆಪರೇಷನ್ ಕಮಲ ನಡೆಸಿದ ಅವಧಿಯಲ್ಲಿ ಶಿವನಗೌಡ ನಾಯಕ್ ಬಿಜೆಪಿ ಪಕ್ಷಕ್ಕೆ ಸೇರಿ ಸಚಿವರಾಗಿದ್ದರು. ಇದೀಗ ರೆಡ್ಡಿ-ನಾಯಕ್ ಭೇಟಿ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ಹೈಕಮಾಂಡ್‌ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ತಮ್ಮದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದರು. ಬಿಜೆಪಿ ಸೇರಿದರೆ ಈ ಪಕ್ಷದ ಕತೆಯೇನಾಗಲಿದೆ ಎಂಬುದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!