ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಈವರೆಗೆ ಭಾರತ ಮಾಡಿದ ಸಹಾಯವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ/ಕೊಲಂಬೊ: ಶ್ರೀಲಂಕಾವು ಆಳವಾದ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿದ್ದು, ರಾಜಪಕ್ಸೆ ಸರಕಾರವು ಇಂಧನ ಆಮದಿನ ಮೊತ್ತ ಪಾವತಿಸಲು ಹೆಣಗಾಡುತ್ತಿದೆ.

ಇದರಿಂದಾಗಿ ದೇಶದಲ್ಲಿ ತೀವ್ರ ವಿದ್ಯುತ್ ಕೊರತೆ ಉಂಟಾಗಿದ್ದು, ಹಿಂಸಾತ್ಮಕ ಪ್ರತಿಭಟನೆಗಳು ವರದಿಯಾಗುತ್ತಿವೆ. ಸರಕಾರವು ತುರ್ತು ಪರಿಸ್ಥಿತಿ ಘೋಷಿಸಿ, ದೇಶಾದ್ಯಂತ 36 ತಾಸುಗಳ ಕರ್ಫ್ಯೂ ವಿಧಿಸಿದೆ. ಇದೀಗ ಸುಮಾರು 600 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಈ ಸಂಕಷ್ಟದ ಸಮಯದಲ್ಲಿ ದ್ವೀಪ ರಾಷ್ಟ್ರವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಭಾರತ ಮುಂದಾಗಿದೆ. ಶ್ರೀಲಂಕಾದ ತುರ್ತು ಮನವಿಗಳಿಗೆ ಭಾರತವು ತ್ವರಿತವಾಗಿ ಸ್ಪಂದಿಸಿದೆ.

ಈ ವರ್ಷದ ಜನವರಿಯಿಂದ ಶ್ರೀಲಂಕಾಕ್ಕೆ ಭಾರತದ ಬೆಂಬಲ 2.5 ಶತಕೋಟಿ ಅಮೆರಿಕನ್ ಡಾಲರ್ ಮೀರಿದೆ. ಫೆಬ್ರವರಿಯಲ್ಲಿ 500 ಮಿಲಿಯನ್ ಅಮೆರಿಕನ್ ಡಾಲರ್ ಇಂಧನ ಸಾಲಕ್ಕೆ ಸಹಿ ಹಾಕಲಾಯಿತು. ಮಾರ್ಚ್‌ ಆರಂಭದಿಂದ ಒಟ್ಟು 150,000 ಟನ್‌ಗಳಷ್ಟು ಜೆಟ್ ಏವಿಯೇಷನ್ ​​ಇಂಧನ, ಡೀಸೆಲ್ ಮತ್ತು ಪೆಟ್ರೋಲ್‌ನ ನಾಲ್ಕು ಸರಕುಗಳನ್ನು ರವಾನೆ ಮಾಡಲಾಗಿದೆ. ಮೇ ತಿಂಗಳವರೆಗೆ ಇನ್ನೂ ಐದು ಸರಕು ರವಾನೆಗಳನ್ನು ಮಾಡಲಾಗುತ್ತದೆ. ಕಳೆದ ತಿಂಗಳು ಆಹಾರ, ಔಷಧ ಮತ್ತು ಅಗತ್ಯ ವಸ್ತುಗಳಿಗೆ 1 ಶತಕೋಟಿ ಅಮೆರಿಕನ್ ಡಾಲರ್ ಮತ್ತೊಂದು ಸಾಲಕ್ಕೆ ಸಹಿ ಮಾಡಲಾಗಿದೆ ಎಂದು ಶ್ರೀಲಂಕಾದಲ್ಲಿನ ಭಾರತದ ಹೈ ಕಮಿಷನರ್ ಗೋಪಾಲ್ ಬ್ಯಾಗ್ಲಿ ತಿಳಿಸಿದ್ದಾರೆ.

ಈ ಸಾಲ ಸೌಲಭ್ಯದ ಅಡಿಯಲ್ಲಿ ಭಾರತದಿಂದ ಅಕ್ಕಿಯ ಮೊದಲ ರವಾನೆಯು ಶ್ರೀಲಂಕಾಕ್ಕೆ ಶೀಘ್ರದಲ್ಲೇ ಆಗಮಿಸುವ ನಿರೀಕ್ಷೆಯಿದೆ ಎಂದು ಬ್ಯಾಗ್ಲಿ ಹೇಳಿದ್ದಾರೆ. ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ 400 ಮಿಲಿಯನ್ ಅಮೆರಿಕನ್ ಡಾಲರ್ ಕರೆನ್ಸಿ ಸ್ವಾಪ್ ಅನ್ನು ವಿಸ್ತರಿಸಿದೆ. ನೂರಾರು ಮಿಲಿಯನ್ ಡಾಲರ್ ಮೌಲ್ಯದ ಏಷ್ಯನ್ ಕ್ಲಿಯರೆನ್ಸ್ ಯೂನಿಯನ್ ಅಡಿಯಲ್ಲಿ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಬಾಕಿಯಿರುವ ಪಾವತಿಗಳನ್ನು ಮುಂದೂಡಿದೆ.

ತೀವ್ರ ವಿದ್ಯುತ್ ಕಡಿತಕ್ಕೆ ಸಾಕ್ಷಿಯಾಗಿರುವ ದ್ವೀಪ ರಾಷ್ಟ್ರದಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡಲು ಭಾರತವು ಶನಿವಾರ 40,000 ಮಿಲಿಯನ್ ಡೀಸೆಲ್ ಅನ್ನು ಶ್ರೀಲಂಕಾಕ್ಕೆ ತಲುಪಿಸಿದೆ. ಕಳೆದ 50 ದಿನಗಳಲ್ಲಿ ಭಾರತವು ದ್ವೀಪ ರಾಷ್ಟ್ರಕ್ಕೆ ಸುಮಾರು 200,000 ಮಿ.ಟನ್ ಇಂಧನವನ್ನು ಪೂರೈಸಿದೆ. ಈ ಸಮಯದಲ್ಲಿ ಶ್ರೀಲಂಕಾದ ಜನರಿಗೆ ಭಾರತದ ತ್ವರಿತ ನೆರವು ಶ್ರೀಲಂಕಾ ಸಮಾಜದ ಎಲ್ಲಾ ವರ್ಗಗಳಿಂದ ಮೆಚ್ಚುಗೆ ಪಡೆದಿದೆ ಎಂದು ಶ್ರೀಲಂಕಾದ ಭಾರತೀಯ ಹೈಕಮಿಷನರ್ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಕುಸಿತದಿಂದಾಗಿ ಶ್ರೀಲಂಕಾದ ಆರ್ಥಿಕತೆಯು ಪತನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!