Tuesday, March 21, 2023

Latest Posts

ಫೇಕ್ ಅಂದವರಿಗೆ ಬಾಯಿ ಮುಚ್ಚಿಸಿರುವೆ : ಶಾಸಕ ಗಾಲಿ ಸೋಮಶೇಖರ್ ರೆಡ್ಡಿ

ಹೊಸದಿಗಂತ ವರದಿ ಬಳ್ಳಾರಿ :

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೊಳಗೇರಿ ನಿವಾಸಿಗಳಿಗೆ ನೀಡಲಾಗುತ್ತಿರುವ ಹಕ್ಕು ಪತ್ರಗಳನ್ನು ಕಾಂಗ್ರೆಸ್ ನವರು ಫೇಕ್ ಎಂದು ಅಪಪ್ರಚಾರ ಮಾಡುತ್ತಿದ್ದು, ಫಲಾನುಭವಿಗಳಿಗಳ ಹೆಸರಿನಲ್ಲಿ ನೊಂದಣಿಯಾದ ಪತ್ರಗಳನ್ನು ವಿತರಿಸಿ ಅವರ ಬಾಯಿ ಮುಚ್ಚಿಸಿರುವೆ, ಸುಳ್ಳು ಹೇಳುವುದೇ ಕಾಂಗ್ರೆಸ್ ನ ಸಂಸ್ಕೃತಿ, ಅವರ ಮಾತಿಗೆ ಜನರು ಕಿವಿಕೊಡಬೇಡಿ ಎಂದು ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಹೇಳಿದರು.

ನಗರದ ಜಿಲ್ಲಾ ನೊಂದಣಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೊಂದಣಿಯಾದ ಪತ್ರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾವು ಯಾವತ್ತು ನುಡಿದಂತೆ ನಡೆದಿದ್ದೇವೆ, ಕಾಂಗ್ರೆಸ್ ನವರಂತೆ ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ, ಇತ್ತೀಚೆಗೆ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದಲೇ 13 ಸಾವಿರಕ್ಕೂ ಹೆಚ್ಚು ಹಕ್ಕು ಪತ್ರಗಳ ವಿತರಣೆಗೆ ಚಾಲನೆ ನೀಡಲಾಗಿದೆ. ಇದನ್ನು ಕಾಂಗ್ರೆಸ್ ನವರು ಫೇಕ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನರಿಗೆ ಇದರ ಬಗ್ಗೆ ಅನುಮಾನಬೇಡ, ಇಲ್ಲಿವರೆಗೆ ನೀಡಿದ ಹಕ್ಕುಪತ್ರಗಳನ್ನು ಭದ್ರವಾಗಿ ಇಟ್ಟುಕೊಳ್ಳಿ, ತೆರಿಗೆ ಪಾವತಿಸಿ ರಸೀದಿ, ಹಕ್ಕುಪತ್ರ, ಸ್ಕೆಚ್ ನೀಡಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಬಹುದು ಎಂದರು.

13 ಸಾವಿರ ಪಟ್ಟಾಗಳಲ್ಲಿ ಇಲ್ಲಿವರೆಗೆ 7-8 ಸಾವಿರ ಜನರಿಗೆ ಪಟ್ಟಾಗಳನ್ನು ಮನೆ ಮನೆಗೆ ತೆರಳಿ ನೀಡಿರುವೆ, ಉಳಿದವುಗಳನ್ನು ವಿತರಿಸಿ ನೊಂದಣೆ ಮಾಡಿಸುವೆ ಎಂದರು. ಈ ಹಿಂದೆ ಕಾಂಗ್ರೆಸ್ ನವರು ಜನರಿಗೆ ಪರಿಚಯ ಪತ್ರಗಳನ್ನು ನೀಡಿ ವಂಚನೆ ಮಾಡಿದೆ. ಹೀಗಿರುವಾಗ ನಾವು ನೇರವಾಗಿ ಇಲಾಖೆಯಿಂದ ಹಕ್ಕು ಪತ್ರಗಳನ್ನು ನೀಡಿದರೇ ಫೇಕ್ ಅಂತಾರೇ ದೇವರೇ ಅವರನ್ನ ಕಾಪಾಡಬೇಕು. ನಮ್ಮದು ಪರ್ಮನೆಂಟ್ ಪತ್ರಗಳು ಜನರು ಗೊಂದಲಕ್ಕೀಡಾಗಬಾರದು, ಇಂದು ಅಂದ್ರಾಳ್ ಪ್ರದೇಶದ 320ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರಗಳನ್ನು ನೀಡಲಾಗಿದೆ. ನಮ್ಮ ಬಿಜೆಪಿ ಬಡವರ ಪರ ಇರುವ ಸರ್ಕಾರ, ಬಡಜನರ ಸೇವೆಯೇ ನಮ್ಮ ಮೊದಲ ಅಜೆಂಡಾ, ಅಭಿವೃದ್ಧಿಯೇ ನಮ್ಮ ಮೂಲ ಮಂತ್ರವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಪ್ರತಾಪ ರೆಡ್ಡಿ, ರಾಜು ಮುತ್ತಗಿ, ಶಿವಾನಂದ್ ಸೇರಿ ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!