ಕಾಶ್ಮೀರಿಯನ್ನು ಜೀವಂತವಾಗಿಯಾದರೂ ಸರಿ, ಕೊಂದಾದರೂ ಸರಿ ಹಿಡಿದು ತನ್ನಿ ಎಂದು ಕಟ್ಟಪ್ಪಣೆ ಹೊರಡಿಸಿತ್ತು ಬ್ರಿಟೀಷ್‌ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಶ್ಯಾಮ್ ನಾರಾಯಣ ಕಾಶ್ಮೀರಿ ಅವರು 1915 ರ ಅಕ್ಟೋಬರ್ 17 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಪ್ರತಾಪ್ ನಾರಾಯಣ ಕಾಶ್ಮೀರಿಯವರ ಪುತ್ರನಾಗಿ ಜನಿಸಿದರು. 16ನೇ ವಯಸ್ಸಿನಿಂದಲೇ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಲು ಆರಂಭಿಸಿದ ಕಾರಣ ಅವರಿಗೆ ಇಂಟರ್ ಮೀಡಿಯೇಟ್ ನಂತರ ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. 1931ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ 6 ತಿಂಗಳ ಕಾಲ ಜೈಲುವಾಸ ಅನುಭವಿಸಿದರು. ಹಿಸ್ಡಸ್ ಹಿಂದೂಸ್ತಾನಿ ರೆಡ್ ಆರ್ಮಿ, ನಾಗಪುರದ ಅರೆಸೇನಾಪಡೆ ಸಂಘಟನೆಯಲ್ಲಿ ಕೆಲಸ ಮಾಡಿ ದೇಶದ ಸ್ವಾತಂತ್ರ್ಯ ಚಳುವಳಿಗೆ ಮಹತ್ವದ ಕೊಡುಗೆ ನೀಡಿದರು. ಅವರು 1933 ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಪ್ರಾಂತೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಬ್ರಿಟೀಷ್‌ ಸರ್ಕಾರದ ವಿರುದ್ಧ ವಿಪಿ ಮತ್ತು ಬ್ರಾರ್ ಪಿತೂರಿಗಳಲ್ಲಿ ಪಾಲ್ಗೊಂಡಿದ್ದಕ್ಕೆ ಅವರಿಗೆ 12 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ ಆ ಬಳಿಕ ಶಿಕ್ಷೆಯ ಪ್ರಮಾಣವನ್ನು ಇಳಿಸಿ 1937 ರಲ್ಲಿ ಅವರನ್ನು ಅಕೋಲಾ ಜೈಲಿನಿಂದ ಬಿಡುಗಡೆ ಮಾಡಲಾಯಿತು. 1938 ರಲ್ಲಿ, ಅವರು ‘ಕಿಸಾನ್ ಸಂಸ್ಥೆ’ ಸ್ಥಾಪಿಸಿದರು ಮತ್ತು ‘ಉಮ್ರೇದ್ ಕಿಸಾನ್ ಸತ್ಯಾಗ್ರಹ’ ನಡೆಸಿದರು.
ಬ್ರಿಟೀಷರು ಎಷ್ಟೇ ಕಿರುಕುಳ ನೀಡಿದರೂ  ಶ್ಯಾಮ್ ನಾರಾಯಣ ಕಾಶ್ಮೀರಿ ಅವರ ಸ್ವಾತಂತ್ರ್ಯ ಹೋರಾಟದ ಉಮ್ಮೇದಿ ಇಳಿದಿರಲಿಲ್ಲ. ಅವರು ಮಧ್ಯಪ್ರದೇಶ ಸ್ವಾತಂತ್ರ್ಯ ಸಂಗ್ರಾಮ ಸಂಘದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಮುಂದುವರೆಸಿದರು.
ಇದಲ್ಲದೆ, ಅವರು ಮಧ್ಯಪ್ರದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಬ್ರಿಟೀಷರ ವಿರುದ್ಧ ಹೋರಾಟ ತೀವ್ರಗೊಳಿಸಲು ಭೂಗತರಾಗಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು. ಅವರ ಹೋರಾಟಗಳಿಂದ ಬೇಸತ್ತ  ಬ್ರಿಟೀಷ್‌ ಸರ್ಕಾರ ಕಾಶ್ಮೀರಿಯವರನ್ನು ಜೀವಂತವಾಗಿಯಾದರೂ ಸರಿ, ಕೊಂದಾದರೂ ಸರಿ ಹಿಡಿದು ತರುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿತ್ತು. ಅವರನ್ನು ಜೀವಂತವಾಗಿ ಹಿಡಿದುಕೊಟ್ಟ ವ್ಯಕ್ತಿಗೆ 5000 ರೂಪಾಯಿಗಳ ಬಹುಮಾನವನ್ನು ಘೋಷಿಸಲಾಯಿತು. ಕಾಶ್ಮೀರಿ ತಮ್ಮ ಜೀವಮಾನವನ್ನು ಸ್ವಾತಂತ್ರ್ಯ ಹೋರಾಟಕ್ಕೆ ವ್ಯಯಿಸಿದರು. ತಮ್ಮ ಜೀವನದ ನಾಲ್ಕೂವರೆ ವರ್ಷಗಳನ್ನು ಕಠಿಣ ಸೆರೆವಾಸದಲ್ಲಿ ಮತ್ತು ಆರು ವರ್ಷಗಳನ್ನು ತಲೆಮರೆಸಿಕೊಳ್ಳುವುದರಲ್ಲಿ ಕಳೆದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!