ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶಾಲಾ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗಿದ್ದು, ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸುವಂತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಾಹಿತಿಗಳ ಜೊತೆ ಚರ್ಚೆ ಮಾಡಿರುವ ಸಿದ್ದರಾಮಯ್ಯ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ ಲೋಪದೋಷಗಳು ಸರಿಪಡಿಸುವಂತೆ ಸಮಿತಿಗೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಗರದ ಶಕ್ತಿ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, 2017ನೇ ಸಾಲಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಖ್ಯಸ್ಥರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿದಂತೆ ವಿವಿಧ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು, ಅಧಿಕಾರಿಗಳ ಸಭೆ ನಡೆಸಲಾಯಿತು. . ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕ ವಿತರಣೆ ಮಾಡಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂದು ಸಭೆಯಲ್ಲಿ ಚರ್ಚೆ ನಡೆದಿದೆ.