Thursday, July 7, 2022

Latest Posts

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮೈಷುಗರ್ ಕಾರ್ಖಾನೆ ಆರಂಭ: ಸಿದ್ದರಾಮಯ್ಯ ಭರವಸೆ

ಹೊಸದಿಗಂತ ವರದಿ, ಮಂಡ್ಯ
ಕಾಂಗ್ರೆಸ್ ಸರ್ಕಾರ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಮಂಡ್ಯದ ಜೀವನಾಡಿಯಾದ ಮೈಷುಗರ್ ಕಾರ್ಖಾನೆಯನ್ನು ಆರಂಭಿಸುತ್ತೇವೆ. ಆ ಮೂಲಕ ನಿಮ್ಮ ನಿರೀಕ್ಷೆಯನ್ನು ನಿಜ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ನಡದೆ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವವನಲ್ಲ. ನಮ್ಮನ್ನು ನಂಬಿ, ಈ ಜಿಲ್ಲೆಯ ಏಳೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಕೊಡಿ. ಆಗ ಜಿಲ್ಲೆಯ ಅಭಿವೃದ್ಧಿ ಹೇಗೆ ಆಗುತ್ತದೆ ಎಂಬುದನ್ನು ನೀವೇ ನೋಡುವಿರಂತೆ. ನಾನು ಮುಖ್ಯಮಂತ್ರಿಯಾಗಿ ಕೊಟ್ಟ ಎಲ್ಲ ಯೋಜನೆಗಳೂ, ಸೌಲಭ್ಯಗಳು ಜಾತಿ, ಧರ್ಮಾತೀತವಾಗಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ಅರಿತುಕೊಂಡು ಮುಂದಿನ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಬೇಕು. ಇಲ್ಲದಿದ್ದರೆ ಈ 40 ಪರ್ಸೆಂಟ್ ಜನರ ಕೈಗೆ ಸಿಕ್ಕಿ ನರಳಬೇಕಾಗುತ್ತದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ 15 ಲಕ್ಷ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಸರ್ಕಾರ 2.5 ಲಕ್ಷ ಟನ್ ಖರೀದಿಗೆ ಭರವಸೆ ನೀಡಿತ್ತು. ಅದರಲ್ಲೂ ಕೇವಲ 1.90 ಲಕ್ಷ ಟನ್ ಮಾತ್ರ ಖರೀದಿ ಮಾಡಿದೆ. ಇಂತಹವರಿಂದ ರೈತಾಪಿ ವರ್ಗ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಇವರು ರೈತರ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಸಿದ್ದರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss