ಹೊಸದಿಗಂತ ಡಿಜಿಟಲ್ ಡೆಸ್ಕ್:
ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರು ಹೆದರುವವರಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡದಿದ್ದರೇ ಸಿಎಂ ಏಕೆ ಹೆದರಬೇಕು ಎನ್ನುವ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಯಾರು ಹೆದರಿದ್ದಾರೆ. ಶೆಟ್ಟರ್ ಅವರಿಗೆ ಹೆದರಿಕೆ ಇರಬೇಕು. ನಾವು ಈ ನೆಲದ ಕಾನೂನಿಗೆ ಗೌರವ ನೀಡುತ್ತೇವೆ. ಸಿಎಂ ಅವರ ತಪ್ಪು ಇಲ್ಲದಿರುವ ಕಾರಣಕ್ಕೆ ಹೈಕೋರ್ಟ್ ಪ್ರಾಸಿಕ್ಯೂಷನ್‌ಗೆ ತಡೆ ನೀಡಿದೆ. ಈ ಹಿಂದೆ ರಚನೆ ಮಾಡಿರುವ ಆಯೋಗದಂತೆ ನ್ಯಾಯಾಂಗ ತನಿಖೆ ನಡೆಯಲಿದೆ ಎಂದು ತಿಳಿಸಿದರು.
ಐದು ವರ್ಷವೂ ಸಿದ್ದರಾಮಯ್ಯ ಐದು ವರ್ಷದ ಅವಧಿ ಪೂರ್ಣಗೊಳಿಸುತ್ತಾರೆಯೇ ಎಂದು ಪ್ರಶ್ನಿಸಿದಾಗ ‘ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ’ ಎಂದರು.
ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ಕೇಳಿದಾಗ ‘ಅವರನ್ನು ರಾಜ್ಯಪಾಲರ ಹುದ್ದೆಗೆ ಕೂರಿಸಿರುವುದು ಸಂವಿಧಾನವೇ ಹೊರತು ಜಾತಿಯಲ್ಲ’ ಎಂದು ತಿಳಿಸಿದರು.