ಹೊಸದಿಗಂತ ವರದಿ ಬಳ್ಳಾರಿ:
ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಮುಖಂಡರು ಹಾಗೂ ಅಹಿಂದ ಸಂಘಟನೆ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಎರಡು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಆಗ್ರಹಿಸಿದ್ದಾರೆ.
ಹೈಕಮಾಂಡ್ ತಮ್ಮ ನಿರ್ಧಾರವನ್ನು ಬದಲಿಸದಿದ್ದರೆ 2028ರ ಚುನಾವಣೆಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಶಕ್ತಿಯನ್ನು ಕಾಂಗ್ರೆಸ್‌ಗೆ ತೋರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹೈಕಮಾಂಡ್ ನಿರ್ಧಾರ ಹಿಂಪಡೆಯಲು ಒತ್ತಾಯ
ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ಪಿ.ಎಲ್. ಗಾದಿಲಿಂಗನ ಗೌಡ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗಗಳ ವಿಶ್ವಾಸ ಗಳಿಸಿದ್ದಾರೆ. ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕುವ ಯಾವುದೇ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಮಾಜದಿಂದ ಬೀದಿಗಿಳಿಯುವ ಎಚ್ಚರಿಕೆ
ಪ್ರಧಾನ ಕಾರ್ಯದರ್ಶಿ ಕೆ. ಮೋಹನ್ ಅವರು ಮಾತನಾಡಿ, ನಿರ್ಧಾರವನ್ನು ಬದಲಾಯಿಸದಿದ್ದರೆ ಅಹಿಂದ ಹಾಗೂ ಕುರುಬ ಸಮಾಜ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.
ಇದನ್ನೂ ಓದಿ:
ಸಿದ್ದರಾಮಯ್ಯ ಆಡಳಿತಕ್ಕೆ ಪ್ರಶಂಸೆ, ಗ್ಯಾರಂಟಿ ಯೋಜನೆಗಳ ಸಾಧನೆ
ಮುಖಂಡರು ಸಿದ್ದರಾಮಯ್ಯ ಅವರನ್ನು ದೇವರಾಜ್ ಅರಸು ಮಾದರಿಯ ಆಡಳಿತಗಾರ ಎಂದು ಹೊಗಳಿದ್ದು, ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದನ್ನು ದೇಶವೇ ಗಮನಿಸುತ್ತಿದೆ ಎಂದು ಹೇಳಿದರು.
ರಾಜಕೀಯ ಎಚ್ಚರಿಕೆ ಸಂದೇಶ
ಅಹಿಂದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಭಟ್ಟಿ ಯಾರಿಸ್ವಾಮಿ ಅವರು ಸಿದ್ದರಾಮಯ್ಯ ಅವರ ವಿರುದ್ಧದ ಯಾವುದೇ ಕ್ರಮ ಸರಿಯಲ್ಲ ಎಂದು ಹೇಳಿದ್ದು, ಹೈಕಮಾಂಡ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.



