ಹೊಸದಿಗಂತ ವರದಿ,ಬೆಳಗಾವಿ:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪ್ರಕರಣದ ಸಂದರ್ಭದಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯ ಏನು ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಂಡು ನಿರ್ಣಯ ಕೈಗೊಳ್ಳಲಿ ಎಂದರು.
ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಹೋರಾಟ ಮೂಲಕವೇ ಮುಖ್ಯಮಂತ್ರಿ ಹುದ್ದೆವರೆಗೆ ಬಂದವರು. ಆದರೆ, ಯಡಿಯೂರಪ್ಪ ಸಂದರ್ಭದಲ್ಲಿ ಸಿದ್ದರಾಮಯ್ಯ ಏನು ಮಾತನಾಡಿದ್ದಾರೆಯೋ ಪ್ರತಿಯೊಂದು ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು ಎಂದು ಸವಾಲು ಹಾಕಿದರಲ್ಲದೇ, ಬೇರೆಯವರ ರೀತಿ ನಾನು ರಾಜಕೀಯ ದುರದ್ದೇಶ ಇಟ್ಟುಕೊಂಡು ಮಾತಾಡುವುದಿಲ್ಲ. ಅವರ ಬಗ್ಗೆ ಗೌರವವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ. ಅದರಂತೆ ಸಿಡಿ ಶಿವು( ಡಿ.ಕೆ.ಶಿವಕುಮಾರ ಹೆಸರು ಹೇಳದೇ) ಬಂದರೆ ಎರಡು ದಿನದಲ್ಲಿ ಸರ್ಕಾರ ಬೀಳುತ್ತದೆ. ಪಕ್ಷವೂ ಹಾಳಾಗುತ್ತದೆ ಎಂದು ಭವಿಷ್ಯ ನೀಡಿದ ರಮೇಶ ಜಾರಕಿಹೊಳಿ, ಒಂದುವೇಳೆ ಅವರು(ಡಿಕೆಶಿ) ಮುಖ್ಯಮಂತ್ರಿ ರೇಸ್ ನಲ್ಲಿದ್ದರೆ ರಾಜ್ಯ ಅಧೋಗತಿಗೆ ಹೋಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇನ್ನು, ಮೊನ್ನೆ ಬೆಳಗಾವಿಯಲ್ಲಿ ನಡೆದ ಸಭೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೆಲವೊಂದು ವಿಷಯಗಳನ್ನ ಮಾತಾಡಬಾರದು ಅಂತಾ ನಮ್ಮ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಅರವಿಂದ್ ಲಿಂಬಾವಳಿ ಒಬ್ಬರೇ ಮಾತನಾಡುತ್ತಾರೆ. ಆ ನಿಟ್ಟಿನಲ್ಲಿ ಪಕ್ಷ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ದನಿದ್ದೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.