ಸಿದ್ದರಾಮಯ್ಯರದ್ದು ಬೇಜವಾಬ್ದಾರಿ ನಡೆ: ಸಚಿವ ಅಶ್ವತ್ಥ ನಾರಾಯಣ್

ದಿಗಂತ ವರದಿ ಮಂಗಳೂರು:

ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರಕಾರ ಪ್ರಯತ್ನ ನಡೆಸುತ್ತಿದ್ದು, ಎಲ್ಲ ವ್ಯವಸ್ಥೆ ಮಾಡಿದೆ. ಆದರೂ, ಪ್ರತಿಪಕ್ಷ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೀಕೆ ಮಾಡುತ್ತಿರುವುದು ಬೇಜವಾಬ್ದಾರಿ ನಡೆಯಾಗಿದೆ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಹೇಳಿದರು.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವಲ್ಲಿ ಸರಕಾರ ಬೇಜವಾಬ್ದಾರಿ ತೋರಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಂಗಳೂರಿನಲ್ಲಿ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರ ಹೇಳಿಕೆಯೇ ಬೇಜವಾಬ್ದಾರಿಯಿಂದ ಕೂಡಿದೆ. ಇಡೀ ವಿಶ್ವದ ರಾಷ್ಟ್ರಗಳ ಪೈಕಿ ಭಾರತ ಮಾತ್ರ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಏರ್‌ಲಿಫ್ಟ್ ಮಾಡುತ್ತಿದೆ. ಇದಕ್ಕಾಗಿ ನಾಲ್ವರು ಸಚಿವರನ್ನು ಕೇಂದ್ರ ಸರಕಾರ ನಿಯೋಜಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಖುದ್ದಾಗಿ ಈ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸವಾಲಿನ ಸ್ಥಿತಿಯನ್ನು ಕೇಂದ್ರ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಆದರೆ, ವಿರೋಧ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಮಾಹಿತಿಯ ಕೊರತೆ ಇದೆ. ಇಂತಹಾ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಅಧಿಕಗೊಂಡ ಕಾರಣ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳುತ್ತಿದ್ದಾರೆ ಎಂಬ ಕುರಿತ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವರು, ಪ್ರಸ್ತುತ ಅಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಕರೆತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಮ್ಮಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ಶೇ.40 ಉಚಿತ ಸೀಟ್‌ಗಳಿವೆ. ಜತೆಗೆ ಸರಕಾರಿ ಮೆಡಿಕಲ್ ಕಾಲೇಜುಗಳೂ ಇವೆ. ಇನ್ನೂ ಯಾವ ರೀತಿ ಸುಧಾರಣೆ ಆಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿ, ತಜ್ಞರು, ಸಮಾಜದ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ತುಳು ಭಾಷೆ, ಶಿಕ್ಷಣದ ಬೆಳವಣಿಗೆಗೆ ಬೇಕಾದ ಎಲ್ಲ ಸಹಕಾರ ನೀಡಲು ರಾಜ್ಯ ಸರಕಾರ ಬದ್ದವಿದೆ ಎಂದು ಅಶ್ವಥ್‌ನಾರಾಯಣ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!