ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅಸಮರ್ಥ: ಸಚಿವ ಸೋಮಶೇಖರ್

ಹೊಸದಿಗಂತ ವರದಿ ಮೈಸೂರು:

ವಿಪಕ್ಷ ನಾಯಕ ಸಿದ್ದರಾಮಯ್ಯನವರು ನಾನೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ ಎಂದು ತೋರಿಸಿಕೊಳ್ಳಲು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಾರೆಯೇ ಹೊರತು ವಿರೋಧ ಪಕ್ಷದ ನಾಯಕರ ಕೆಲಸವನ್ನು ಅವರು ಸಮರ್ಥವಾಗಿ ಮಾಡುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಲೇವಡಿ ಮಾಡಿದರು.

ಶನಿವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿರುವಂತೆ ನಮ್ಮ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ದುರ್ಬಲರಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲಿ, ಸಾರ್ವಜನಿಕರಿಗೆ ಅನುಕೂಲವಾಗುವ  ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ. ಕ್ಯಾಬಿನೆಟ್‌ಲ್ಲಿ ಸಾಧಕ ಬಾಧಕ ಚರ್ಚೆ ಮಾಡಿ, ಒಂದೊಂದನ್ನು ನೂರಾರು ಬಾರಿ ಯೋಚನೆ ಮಾಡಿ ಸಿಎಂ ಕೆಲಸ ಮಾಡುತ್ತಾರೆ.

ಸಿದ್ದರಾಮಯ್ಯನವರಿಗೆ ಈಗ ಕಾಂಗ್ರೆಸ್‌ನಲ್ಲಿ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಹಾಗಾಗಿಯೇ ವಿರೋಧ ಪಕ್ಷದ ನಾಯಕರು ಈಗ ಏನಾದರೂ ಮಾತಾಡಬೇಕಲ್ಲ, ಅದಕ್ಕೆ ಮಾತಾಡುತ್ತಾರೆಯೇ ವಿನಃ ಯಾವುದೇ ನಿರ್ದಿಷ್ಟ ಗುರಿಯಿಲ್ಲ. ವಿರೋಧ ಪಕ್ಷದ ನಾಯಕರ ಸೌಲಭ್ಯ ಏನು ಬೇಕು ಅದನ್ನೆಲ್ಲ ತೆಗೆದುಕೊಳ್ಳುತ್ತಾರೆ. ಆದರೆ ವಿರೋಧ ಪಕ್ಷದಲ್ಲಿದ್ದು ಮಾಡಬೇಕಾದ ಕೆಲಸವನ್ನು ಮಾತ್ರ ಮಾಡುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಮುಂಚೆ ಅಷ್ಟು ಇರಲಿಲ್ಲ, ಕೇಂದ್ರದ ಎಐಸಿಸಿ ಹಂತದಲ್ಲಿ ನಡೆಯುತ್ತಿತ್ತು. ಇದೀಗ ಇಲ್ಲಿ ಎಲ್ಲರೂ ನಾಯಕರು ಅನ್ನೋ ರೀತಿಯಲ್ಲಿ ಹೊರಟಿದ್ದಾರೆ. ಅವರು ಇವರ ಮೇಲೆ, ಇವರು ಅವರ ಮೇಲೆ ಹೇಳುವುದು ಜಾಸ್ತಿಯಾಗುತ್ತಿದೆ. ಪ್ರಾಥಮಿಕ ಹಂತದಲ್ಲಿರುವ ಕಚ್ಚಾಟ ವಿಕೋಪಕ್ಕೆ ಹೋಗಿ ಕಾಂಗ್ರೆಸ್ ಇಬ್ಭಾಗವಾಗುವ ಮಟ್ಟಕ್ಕೆ ತಲುಪಲಿದೆ ಇದು ನನಗೆ ಇರುವಂತಹ ಮಾಹಿತಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!